ಕಾರವಾರ(ಉತ್ತರ ಕನ್ನಡ): ಹೊಸ ವರ್ಷಾಚರಣೆ ವೇಳೆ ಭಟ್ಕಳದಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ ಪೊಲೀಸ್ ಠಾಣೆಗೆ ಬೆದರಿಕೆ ಪತ್ರ ಬರೆದಿರುವ ವಿಚಾರವೊಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಚೆನ್ನೈನಲ್ಲಿ ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ಮೂಲದ ಹನುಮಂತಪ್ಪ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಓರ್ವ ಕಳ್ಳತನದ ಆರೋಪಿಯಾಗಿದ್ದಾನೆ. ಇದೊಂದು ಹುಸಿ ಬೆದರಿಕೆ ಪತ್ರ ಎಂಬುದು ಪೊಲೀಸರಿಗೆ ತನಿಖೆ ವೇಳೆ ತಿಳಿದುಬಂದಿದೆ.
ಅಂಚೆ ಮೂಲಕ ಬಂದಿದ್ದ ಪತ್ರ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ, ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25 & ಹ್ಯಾಪಿ ನ್ಯೂ ಇಯರ್ 2023" ಎಂದು ಉರ್ದು ಹಾಗೂ ಇಂಗ್ಲಿಷ್ ನಲ್ಲಿ ಬರೆದಿದ್ದ ಪತ್ರವೊಂದು ಅಂಚೆ ಮೂಲಕ ಭಟ್ಕಳ ಠಾಣೆಗೆ ಬಂದು ತಲುಪಿತ್ತು. ಸೂಕ್ಷ್ಮ ವಿಚಾರವಾಗಿದ್ದರಿಂದ ವಿಷಯವನ್ನು ಬಹಿರಂಗಪಡಿಸದೆ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಕಳ್ಳನೋರ್ವ ಬೆಂಗಳೂರಿನಲ್ಲಿ ಲ್ಯಾಪ್‌ಟಾಪ್ ಕದ್ದು, ಚೆನ್ನೈನಲ್ಲಿ ಮಾರಾಟ ಮಾಡಲು ಹೋಗಿದ್ದ. ಮಾರಾಟ ಮಾಡುವಾಗ ಅಂಗಡಿ ಮಾಲೀಕನಿಗೆ ಅನುಮಾನ ಬಂದು ಈತನಲ್ಲಿ ಪ್ರಶ್ನಿಸಿದಾಗ ಆರೋಪಿಯು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ ಆರೋಪಿಯು ಅಂಗಡಿ ಮಾಲೀಕನಿಗೆ ಬೆದರಿಕೆ ಹಾಕಿದ್ದಾನೆ.
ಘಟನೆ ವಿವರ :ಇನ್ನು ಬಂಧಿತ ಆರೋಪಿ ಹನುಮಂತ ಬೆಂಗಳೂರಿನ ವೈಟ್ ಫಿಲ್ಡ್‌ನಲ್ಲಿ ಆ್ಯಪಲ್ ಕಂಪೆನಿಯ ಲ್ಯಾಪ್ಟಾಪ್ನ್ನು ಕಳ್ಳತನ ಮಾಡಿದ್ದ. ಬಳಿಕ ಅದನ್ನು ಮಾರಲು ಚೆನ್ನೈಗೆ ತೆರಳಿದ್ದ. ಬಳಿಕ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಯತ್ನಿಸಿದ್ದು,ಅಂಗಡಿ ಮಾಲೀಕ ಲ್ಯಾಪ್‌ಟಾಪ್‌ನ ಮ್ಯಾಕ್ ಐಡಿ, ಪಾಸ್‌ವರ್ಡ್ ಕೇಳಿದಾಗ ಕಳ್ಳತನ ಬಯಲಾಗಿದೆ. ಬಳಿಕ ಅಲ್ಲಿಂದ ಆರೋಪಿ ತಪ್ಪಿಸಿಕೊಂಡು ವಾಪಾಸ್ ಬೆಂಗಳೂರಿಗೆ ಬಂದಿದ್ದ.