ಕರ್ನಾಟಕ

karnataka

ETV Bharat / state

ಸಕಲ ಸಂಕಷ್ಟ ನಿವಾರಿಸುವ ಮಾರಮ್ಮ.. ಮನೆಗೆ ಬೇಡವಾದ ವಸ್ತುಗಳೇ ಈ ದೇವಿಗೆ ಹರಕೆ!

ದಕ್ಷಿಣ ಭಾರತದ ಜಾಗೃತ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಶಿರಸಿಯ ಶ್ರೀ ಮಾರಿಕಾಂಬಾ ದೇವಿಗೆ ತಮ್ಮ ಕಷ್ಟಗಳನ್ನು ನಿವಾರಿಸುವಂತೆ ಮನೆಯಲ್ಲಿ ಉಪಯೋಗಿಸಿ ಬೇಡವಾದ ವಸ್ತುಗಳನ್ನು ಹರಕೆ ರೂಪದಲ್ಲಿ ಸಲ್ಲಿಸಲಾಗುತ್ತದೆ. ಈ ವಸ್ತುಗಳನ್ನೇ ಮೆಚ್ಚಿ ದೇವಿ ಕಷ್ಟ ನಿವಾರಿಸುತ್ತಾಳೆ ಎಂಬ ನಂಬಿಕೆ ಇಲ್ಲಿ ಬೇರೂರಿದೆ.

By

Published : Apr 2, 2022, 10:54 AM IST

Updated : Apr 2, 2022, 1:23 PM IST

Maramma devi Of Karavara
ಕಾರವಾರದ ಮಾರಮ್ಮ ದೇವಿ

ಕಾರವಾರ(ಉತ್ತರ ಕನ್ನಡ): ಜನರು ಕಷ್ಟಗಳು ಎದುರಾದಾಗ ದೇವರಿಗೆ ವಿವಿಧ ರೀತಿಯಲ್ಲಿ ಹರಕೆಗಳನ್ನ ಸಲ್ಲಿಸುತ್ತಾರೆ. ದೇವರಿಗೆ ಹೂವು, ಹಣ್ಣುಕಾಯಿ ಜೊತೆಗೆ ಅನ್ನಸಂತರ್ಪಣೆಯಂತಹ ಸೇವೆಗಳನ್ನ ಹರಕೆಯಾಗಿ ಹೊತ್ತುಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಮನೆಯಲ್ಲಿ ಉಪಯೋಗಿಸದಂತಹ ವಸ್ತುಗಳನ್ನ ದೇವರಿಗೆ ಹರಕೆಯಾಗಿ ಸಲ್ಲಿಸುವ ಪದ್ಧತಿ ರೂಢಿಯಲ್ಲಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಹೀಗೊಂದು ಮಾರಮ್ಮನ ದೇವಸ್ಥಾನವಿದ್ದು, ಈ ದೇವಿಗೆ ಮನೆಗೆ ಬೇಡವಾದ ವಸ್ತುಗಳನ್ನೇ ಹರಕೆಯಾಗಿ ಸಲ್ಲಿಸಲಾಗುತ್ತದೆ. ಭಕ್ತರು ಉಪ್ಪಿನ ಪೊಟ್ಟಣವನ್ನೂ ಅರ್ಪಿಸಲಾಗುತ್ತದೆ. ದೇವಸ್ಥಾನದ ಬಳಿ ರಾಶಿ ಬಿದ್ದಿರುವುದು ಕಸವಲ್ಲ, ಇದನ್ನು ಹರಕೆ ರೂಪದಲ್ಲಿ ಸಲ್ಲಿಸುವ ಮಾರಿ ಹೊರೆ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದ ಜಾಗೃತ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಶಕ್ತಿ ದೇವತೆಗಳಲ್ಲಿ ಒಂದೆನಿಸಿದೆ.

ಕಾರವಾರದ ಮಾರಮ್ಮ ದೇವಿಗೆ ಭಕ್ತರ ಹರಕೆ

ಈ ದೇವರಿಗೆ ಯಾವುದೇ ಹರಕೆ ಹೊತ್ತುಕೊಂಡಲ್ಲಿ ಅದು ಈಡೇರುತ್ತದೆ ಎನ್ನುವ ನಂಬಿಕೆ ಜನರಲ್ಲಿದ್ದು ಅದರಂತೆ ಗಡಿ ಮಾರಿ ಅಥವಾ ಸೀಮೆ ಮಾರಿ ಎಂದು ಕರೆಯಲ್ಪಡುವ ದೇವಿಗೆ ಹರಕೆ ಸಲ್ಲಿಸುವುದು ಪ್ರತಿಯೊಂದು ಗ್ರಾಮದಲ್ಲಿ ಆಚರಣೆಯಲ್ಲಿದೆ. ತಮಗೆ ಎದುರಾಗಿರುವ ಸಂಕಷ್ಟಗಳು, ರೋಗ ರುಜಿನಗಳು ದೂರಾಗಲಿ ಎಂದು ಹರಕೆಯನ್ನು ಹೊತ್ತುಕೊಳ್ಳಲಾಗುತ್ತದೆ. ಅದರಂತೆ ತಾವು ಉಪಯೋಗಿಸಿದ ಬಟ್ಟೆ, ಬಳೆ, ತೊಟ್ಟಿಲು ಸೇರಿದಂತೆ ಮನೆಯಲ್ಲಿನ ವಸ್ತುವೊಂದನ್ನ ತಂದು ಗ್ರಾಮದ ಸೀಮೆಯಲ್ಲಿರುವ ಮಾರಿ ದೇವರ ಬಳಿ ಇಟ್ಟು ಹೋಗುತ್ತಾರೆ.

ಹೀಗೆ ಮನೆಯಲ್ಲಿ ಉಪಯೋಗಿಸಲ್ಪಟ್ಟ ವಸ್ತುವನ್ನು ಹರಕೆ ರೂಪದಲ್ಲಿ ಸಲ್ಲಿಸಿದರೆ ತಮ್ಮ ಕಷ್ಟಗಳು ಅವುಗಳ ಮೂಲಕ ದೂರಾಗುತ್ತವೆ ಎನ್ನುವ ನಂಬಿಕೆಯಿದ್ದು ಹೀಗೆ ಸಂಗ್ರಹವಾದ ಹರಕೆಯ ವಸ್ತುಗಳನ್ನು ವರ್ಷಕ್ಕೊಮ್ಮೆ ಆಯಾ ಗ್ರಾಮಸ್ಥರು ತಮ್ಮ ಗ್ರಾಮದ ಸೀಮೆಯಿಂದ ಪಕ್ಕದ ಗ್ರಾಮದ ಸೀಮೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ. ಈ ಮಾರಿಹೊರೆ ಪ್ರತಿವರ್ಷ ಶಿರಸಿಯಿಂದ ಆರಂಭವಾಗಿ ಗ್ರಾಮದಿಂದ ಗ್ರಾಮಕ್ಕೆ ಸ್ಥಳಾಂತರವಾಗುತ್ತ ಸಾಗುತ್ತದೆ. ಆಯಾ ಗ್ರಾಮಗಳು ತಮ್ಮ ಸೀಮೆಯಿಂದ ನೆರೆಯ ಗ್ರಾಮದ ಸೀಮೆಗೆ ಮಾರಿ ಹೊರೆಯನ್ನು ದಾಟಿಸುತ್ತಾರೆ. ಹೀಗೆ ಬರುವ ಮಾರಿ ಹೊರೆ ಕಾರವಾರದ ಗೀತಾಂಜಲಿ ಚಿತ್ರಮಂದಿರ ಬಳಿಯಿರುವ ಮಾರಿದೇವಿ ದೇವಸ್ಥಾನದ ಬಳಿ ಸಂಗ್ರಹವಾಗುತ್ತದೆ.

ವರ್ಷಕ್ಕೆ ಒಂದರಿಂದ ಎರಡು ಹೀಗೆ ಸಂಗ್ರಹವಾಗುವ ಮಾರಿ ಹೊರೆಯನ್ನ ತಾಲೂಕಿನ 18 ಗ್ರಾಮಗಳ ವಿವಿಧ ಸಮುದಾಯದವರು ಸೇರಿಕೊಂಡು ವಾಹನದಲ್ಲಿ ತುಂಬಿ ಮುಂದಿನ ಗ್ರಾಮದ ಸೀಮೆಗೆ ಕಳುಹಿಸಿಕೊಡುತ್ತಾರೆ. ಈ ಮಾರಿಹೊರೆಯನ್ನು ಕಳುಹಿಸಿಕೊಡುವವರೆಗೆ ಗ್ರಾಮದಲ್ಲಿ ಯಾವುದೇ ರೀತಿಯ ಉತ್ಸವ, ಜಾತ್ರೆಗಳಂತಹ ಕಾರ್ಯಗಳನ್ನು ಮಾಡುವಂತಿಲ್ಲ.

ಇದನ್ನೂ ಓದಿ:ಕೆಲವಡಿ ರಂಗನಾಥ ದೇವರಿಗೆ 'ಸಾರಾಯಿಯೇ' ನೈವೇದ್ಯ.. ಭಕ್ತರಿಗೂ ಇದೇ ತೀರ್ಥ!

ಇಲ್ಲಿನ ಮಾರಿ ದೇವಿಗೆ ಉಪ್ಪಿನ ಹರಕೆ ನೀಡುವ ಆಚರಣೆಯಿದ್ದು, ಚರ್ಮ ಸಂಬಂಧಿ ಸಮಸ್ಯೆ ಎದುರಿಸುತ್ತಿರುವವರು ಈ ದೇವರಿಗೆ ಬೇಡಿಕೊಂಡು ಉಪ್ಪು ನೀಡಿದಲ್ಲಿ ಅವರ ರೋಗ ಗುಣವಾಗುತ್ತದೆ ಎನ್ನುವ ನಂಬಿಕೆಯಿದೆ. ತಲೆತಲಾಂತರಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿದ್ದು ಕಳೆದೆರಡು ವರ್ಷ ಕೊರೊನಾ ಕಾರಣದಿಂದಾಗಿ ಮಾರಿ ಹೊರೆ ಸಂಗ್ರಹವಾಗಿರಲಿಲ್ಲ. ಈ ಬಾರಿ ಬರೋಬ್ಬರಿ ಮೂರು ಲಾರಿಯಷ್ಟು ಮಾರಿಹೊರೆ ಸಂಗ್ರಹವಾಗಿದ್ದು, ಎಲ್ಲ ಸಮುದಾಯಗಳು ಸೇರಿಕೊಂಡು ಅದನ್ನ ಮುಂದಿನ ಗ್ರಾಮದ ಸೀಮೆಗೆ ಕಳುಹಿಸಿಕೊಟ್ಟರು.

ಒಟ್ಟಾರೇ ಜನರ ನಂಬಿಕೆಯನುಸಾರ ಉತ್ತರಕನ್ನಡ ಜಿಲ್ಲೆಯಲ್ಲಿ ಮಾರಿ ಹೊರೆ ಅರ್ಪಿಸುವ ಪದ್ಧತಿ ನಡೆದುಕೊಂಡು ಬಂದಿದ್ದು, ಬಳಕೆ ಮಾಡಿದ ವಸ್ತುಗಳನ್ನು ದೇವರಿಗೆ ಹರಕೆಯಾಗಿ ನೀಡುವುದು ನಿಜಕ್ಕೂ ವಿಭಿನ್ನವೇ ಸರಿ.

Last Updated : Apr 2, 2022, 1:23 PM IST

ABOUT THE AUTHOR

...view details