ಕಾರವಾರ :ಕೊರೊನಾ 2ನೇ ಅಲೆ ಅಬ್ಬರಕ್ಕೆ ರಾಜ್ಯದ ಜನರು ತತ್ತರಿಸಿದ್ದಾರೆ. ವೈರಸ್ ಹೊಡೆತದಿಂದ ಇದೀಗ ಚೇತರಿಸಿಕೊಳ್ಳುತ್ತಿರುವ ಜನರಿಗೆ 3ನೇ ಅಲೆ ಮಕ್ಕಳಿಗೆ ಅಪಾಯಕಾರಿ ಎನ್ನುವುದು ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಚಿಂತಿಸಿರುವ ಉತ್ತರಕನ್ನಡ ಜಿಲ್ಲಾಡಳಿತ ಮಕ್ಕಳ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.
ಅಗತ್ಯ ಮುಂಜಾಗ್ರತಾ ಕ್ರಮ :ಕಳೆದ ವರ್ಷಕ್ಕಿಂತ ಈ ಬಾರಿ ಕೊರೊನಾ ಅಬ್ಬರ ಜೋರಾಗಿದೆ. 2ನೆಯ ಅಲೆಯಲ್ಲಿ ಕೊರೊನಾ ಅಟ್ಟಹಾಸಕ್ಕೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಜನರೂ ಸಹ ಹೈರಾಣಾಗಿದ್ದಾರೆ. ಸದ್ಯ 3ನೇ ಅಲೆ ಮಕ್ಕಳನ್ನು ಟಾರ್ಗೆಟ್ ಮಾಡುವ ಮುನ್ಸೂಚನೆ ಇರುವ ಹಿನ್ನೆಲೆ ಮಕ್ಕಳ ಸುರಕ್ಷತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಉತ್ತರಕನ್ನಡ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕೊರೊನಾ ಹೆಚ್ಚು ಬಾಧಿಸುವ ಸಾಧ್ಯತೆ ಇರುವುದಿಂದ ಜಿಲ್ಲಾಡಳಿತ ಈ ಕುರಿತು ಸರ್ವೇ ನಡೆಸಿದೆ.
ಚ್ಯವನಪ್ರಾಶವನ್ನ ಒಳಗೊಂಡ ಕಿಟ್ :ಜಿಲ್ಲೆಯಲ್ಲಿ ಒಟ್ಟು 1,06,263 ಮಂದಿ ಮಕ್ಕಳಿದ್ದಾರೆ. ಈ ಪೈಕಿ 184 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 4142 ಮಕ್ಕಳು ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳ ಆರೈಕೆಗೆ ಮೆಡಿಕಲ್ ಕಿಟ್‌ನ ಜಿಲ್ಲಾ ಪಂಚಾಯತ್ ವತಿಯಿಂದ ಸಿದ್ಧಪಡಿಸಲಾಗಿದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಮೊದಲ ಹಂತವಾಗಿ ಮಲ್ಟಿವಿಟಮಿನ್, ಪ್ಯಾರಾಸಿಟಮಲ್, ಜಿಂಕ್-ಐಯಾನ್ ಸಿರಪ್ ಹಾಗೂ ಪ್ರೋಟೀನ್ ಪೌಡರ್ ಸೇರಿದಂತೆ ಉಸಿರಾಟಕ್ಕೆ ಅನುಕೂಲವಾಗುವ ಚ್ಯವನಪ್ರಾಶವನ್ನ ಒಳಗೊಂಡ ಕಿಟ್‌ನ ವಿತರಿಸಲು ಸಿದ್ದಪಡಿಸಲಾಗಿದೆ.