ಶಿರಸಿ (ಉತ್ತರ ಕನ್ನಡ):ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಜಿ ಸಂಸದರ ಮನೆಗೆ ಹಾಡಹಗಲೇ ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪದಲ್ಲಿ ಬಂದು ಬಂಗಾರದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಆಘಾತಕಾರಿ ಘಟನೆ ಸೆಪ್ಟಂಬರ್ 9, ಬುಧವಾರದಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ ಕದ್ದು ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾನಗಲ್ ಮೂಲದ ಪರಶುರಾಮ ಸಣ್ಣಮನಿ ಬಂಧಿತ ಆರೋಪಿ. ಈತನಿಂದ ಪೊಲೀಸರು 1 ಲಕ್ಷದ 85 ಸಾವಿರ ಮೌಲ್ಯದ 37 ಗ್ರಾಂ ತೂಕದ ಬಂಗಾರದ ಸರ, ಕೃತ್ಯಕ್ಕೆ ಬಳಸಿದ 15 ಸಾವಿರ ರೂ. ಮೌಲ್ಯದ ಬೈಕ್ ವಶಕ್ಕೆ ಪಡೆಯಲಾಗಿದೆ.
ಘಟನೆ ಹಿನ್ನೆಲೆ: ಕಾಂಗ್ರೆಸ್ನಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ದೇವರಾಜ ನಾಯ್ಕ ಅವರ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಶಿರಸಿ ನಗರದ ಯಲ್ಲಾಪುರ ನಾಕಾದಲ್ಲಿರುವ ಮಾಜಿ ಸಂಸದರ ಮನೆಯಲ್ಲಿ ಅವರ ಪತ್ನಿ ಗೀತಾ ನಾಯ್ಕ ಒಬ್ಬರೇ ಇದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪ ಮಾಡಿಕೊಂಡು, ಅವರ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದುಕೊಂಡು ಹೋಗಿದ್ದನು. ಬುಧವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಘಟನೆ ಜರುಗಿದ್ದು, ಆ ಸಮಯದಲ್ಲಿ ಮಾಜಿ ಸಂಸದರ ಪತ್ನಿ ಹೊರತುಪಡಿಸಿ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ.
ಇದನ್ನೂ ಓದಿ:ಕಾರಿನಲ್ಲಿ ಬಂದು ಮೂರು ಕೆಜಿ ಚಿನ್ನ ಕದ್ದು ಪರಾರಿಯಾದ ಖದೀಮರು
ವಿಷಯ ತಿಳಿದ ನಂತರ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮಗ ನಾಗರಾಜ ನಾಯ್ಕ ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಸುತ್ತಮುತ್ತ ಸಿಸಿಟಿವಿ ಇಲ್ಲದೇ ಇರುವುದು ಪೊಲೀಸರಿಗೆ ಸಮಸ್ಯೆಯಾಗಿತ್ತು. ಆದರೂ ಘಟನೆಯ ನಂತರ ತಕ್ಷಣ ಕಾರ್ಯಪ್ರವೃತ್ತರಾದ ಶಿರಸಿ ಮಾರುಕಟ್ಟೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಸಿಪಿಐ ರಾಮಚಂದ್ರ ನಾಯ್ಕ ನೇತೃತ್ವದಲ್ಲಿ ತಂಡ ರಚಿಸಿ ಕೊನೆಗೂ ಆರೋಪಿಯನ್ನು ಹಾವೇರಿ ಜಿಲ್ಲೆಯಲ್ಲಿ ದಸ್ತಗಿರಿ ಮಾಡಿದ್ದಾರೆ. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಇಂತಹದ್ದೇ ಪ್ರಕರಣವೊಂದು ವರದಿಯಾಗಿತ್ತು. ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದ ಮಹಿಳೆಯರಿಬ್ಬರು, ಮನೆಯೊಡತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಮೇ 26ರಂದು ಬೆಂಗಳೂರಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಲಗ್ಗೆರೆಯ ಪಾರ್ವತಿ ನಗರದಲ್ಲಿ ನಡೆದಿತ್ತು.
ಕೋವಿಡ್ನಿಂದ ಪತಿ ಮೃತಪಟ್ಟಿದ್ದ ಬಳಿಕ ಶಾಂತಮ್ಮ ಮನೆಯಲ್ಲಿ ಒಬ್ಬರೇ ವಾಸವಿದ್ದರು. ನಾಲ್ಕು ಬಾಡಿಗೆ ಮನೆಗಳ ಪೈಕಿ ಎರಡು ಮನೆಗಳು ಖಾಲಿ ಇತ್ತು. ಘಟನೆ ನಡೆದ ದಿನದಂದು ಮಧ್ಯಾಹ್ನ ಮನೆ ಬಳಿ ಇಬ್ಬರು ಮಹಿಳೆಯರು ಬಾಡಿಗೆಗೆ ಮನೆ ಕೇಳಿಕೊಂಡು ಬಂದಿದ್ದರು. ಮನೆ ತೋರಿಸಲು ಶಾಂತಮ್ಮ ಒಳ ಹೋದಾಗ ಅಲ್ಲಿಯೇ ಇದ್ದ ಕಟ್ಟಿಗೆ ತುಂಡುಗಳಿಂದ ಆಕೆಯ ತಲೆ ಮೇಲೆ ಹಲ್ಲೆ ಮಾಡಿದ್ದರು. ಪರಿಣಾಮ ಶಾಂತಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಅವರ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಇದನ್ನೂ ಓದಿ:ಸೊಂಟ ಪಟ್ಟಿಯಲ್ಲಿ ₹1.58 ಕೋಟಿ ಮೌಲ್ಯದ ಚಿನ್ನ! ಬೆಂಗಳೂರು ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ ಇಬ್ಬರು ಪ್ರಯಾಣಿಕರು