ಕಾರವಾರ: ಹಗಲು ಗಾರೆ ಕೆಲಸ ಮಾಡಿಕೊಂಡು ರಾತ್ರಿ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳನೊಬ್ಬನನ್ನು ಯಲ್ಲಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಗಲು ಗಾರೆ ಕೆಲಸ.. ರಾತ್ರಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಅಂತಾರಾಜ್ಯ ಕಳ್ಳ ಅರೆಸ್ಟ್ - ಹಗಲು ಗಾರೆ ಕೆಲಸ ಮಾಡಿಕೊಂಡು ರಾತ್ರಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಅಂತಾರಾಜ್ಯ ಕಳ್ಳ ಅರೆಸ್ಟ್
ಯಲ್ಲಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲು ಗಾರೆ ಕೆಲಸ ಮಾಡಿಕೊಂಡು ರಾತ್ರಿ ವೇಳೆ ಮನೆ ಕಳ್ಳತನ ಮತ್ತು ಬ್ಯಾಂಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಕಾರವಾರದ ಶಿರವಾಡ ನಿವಾಸಿ ಅಶೋಕ ಬಂಡಿವಡ್ಡರ (23) ಬಂಧಿಸಿ ಆರೋಪಿ. 2020ರ ಡಿಸೆಂಬರ್ 18 ರಂದು ಯಲ್ಲಾಪುರ ಪಟ್ಟಣದ ಶಾರದಾ ಗಲ್ಲಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸರು, ಆರೋಪಿ ಅಶೋಕ ಬಂಡಿವಡ್ಡರನನ್ನು ಬಂಧಿಸಿ ಆತನಿಂದ ಸುಮಾರು 55 ಗ್ರಾಂ ತೂಕದ 2 ಬಂಗಾರದ ಚೈನ್, 1 ಬಂಗಾರದ ಬ್ರೇಸ್‌ಲೈಟ್, 3 ಬಂಗಾರದ ಲಕ್ಷ್ಮಿ ಪದಕ ಸೇರಿದಂತೆ ಅಂದಾಜು 2 ಲಕ್ಷದ 50 ಸಾವಿರ ರೂ. ಮೌಲ್ಯದ ಸ್ವತ್ತುಗಳು ಮತ್ತು ಒಂದು ಪಲ್ಸರ್ ಮೋಟಾರ್ ಸೈಕಲ್ ಅನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನು ಆರೋಪಿಯನ್ನು ವಿಚಾರಣೆ ನಡೆಸಿದಾಗ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಯಲ್ಲಾಪುರ, ಭಟ್ಕಳ, ಸಿದ್ದಾಪುರ ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ, ಆನವಟ್ಟಿ, ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ ಹಾಗೂ ಹೊರ ರಾಜ್ಯ ಮಹಾರಾಷ್ಟ್ರದ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ತಿಳಿದು ಬಂದಿದೆ. ಅದಲ್ಲದೇ, ಕಳೆದ 3 - 4 ವರ್ಷಗಳಲ್ಲಿ ಯಲ್ಲಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಈತ, ರಾತ್ರಿ ಹೊತ್ತು ಮನೆ ಕಳ್ಳತನ ಮತ್ತು ಬ್ಯಾಂಕ್ ಕಳ್ಳತನ ಮಾಡಿರುವುದು ತನಿಖೆಯಿಂದ ಬಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.