ಕಾರವಾರ: ಹತ್ತಾರು ವರ್ಷಗಳಿಂದ ನೂರಾರು ಕುಂಟುಂಬಗಳ ಬಾಯಾರಿಕೆ ನೀಗಿಸುತ್ತಿದ್ದ ಬಾವಿಗಳೆರಡು ಇದೀಗ ಬರಿದಾಗಿದೆ. ಇದರಿಂದ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಗೋಗರೆದರೂ ಯಾರೊಬ್ಬರು ತಿರುಗಿ ನೋಡುತ್ತಿಲ್ಲ. ಇದರಿಂದ ಗ್ರಾಮಸ್ಥರು ಸಿಟ್ಟಿಗೆದ್ದಿದ್ದು, ಚುನಾವಣೆಯನ್ನೇ ಬಹಿಷ್ಕರಿಸಲು ಮುಂದಾಗಿದ್ದಾರೆ.
ಹೌದು, ಉತ್ತರಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಸದಾಶಿವಗಡದ ನಾಖುದಾ ಮೊಹಲ್ಲಾ ನಿವಾಸಿಗಳು ಇಂತಹದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಇಲ್ಲಿ ತಲೆದೂರಿರುವ ನೀರಿನ ಸಮಸ್ಯೆ ಇದೀಗ ಗ್ರಾಮಸ್ಥರನ್ನು ಸಂಕಷ್ಟಕ್ಕೆ ದೂಡಿದೆ.
ಗ್ರಾಮದಲ್ಲಿರುವುದು ಎರಡೇ ಕುಡಿಯುವ ನೀರಿನ ಬಾವಿ:
ಇನ್ನು ಇಷ್ಟೊಂದು ಕುಟುಂಬಗಳಿದ್ದರೂ ಗ್ರಾಮದಲ್ಲಿರುವುದು ಎರಡು ಕುಡಿಯುವ ನೀರಿನ ಬಾವಿಗಳು ಮಾತ್ರ. ಒಂದು ಮಸೀದಿಯವರು ತೆಗೆಸಿದ್ದು, ಇನ್ನೊಂದು ಬಾವಿ ಖಾಸಗಿಯವರದಾಗಿದೆ. ನೀರು ಸರಿಯಾಗಿ ಸಿಗದ ಕಾರಣ ಪಾಳು ಬಿದ್ದಿದೆ. ಉಳಿದಂತೆ ಬಾವಿಗಳಿದ್ದರೂ ಉಪ್ಪು ನೀರು ಮತ್ತು ಜವಳು ಮಿಶ್ರಿತವಾಗಿದ್ದರಿಂದ ಪ್ರಯೋಜನಕ್ಕೆ ಬರದಂತಾಗಿದೆ. ಆದರೆ ಇಲ್ಲಿರುವ ಮಸೀದಿ ಬಾವಿಯಲ್ಲಿಯೂ ಕೂಡ ಕಳೆದ ನಾಲ್ಕೈದು ವರ್ಷಗಳಿಂದ ನೀರು ಕಡಿಮೆಯಾಗಿದ್ದು, ಕೆಲ ಬಾರಿ ಅರ್ಧ ಕೊಡ ಸಿಗುವುದು ಕಷ್ಟ ಎನ್ನುತ್ತಾರೆ ಗ್ರಾಮಸ್ಥರು.