ಭಟ್ಕಳ: ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯವಾದ ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನಕ್ಕೆ ತಡರಾತ್ರಿ ಹಿಂಬದಿಯ ಗೋಡೆಯನ್ನು ಹತ್ತಿ ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬವನ್ನು ಎತ್ತಿಕೊಂಡು ಹೋಗಿದ್ದಾರೆ. ಅದರಲ್ಲಿದ್ದ ಅಂದಾಜು 30 ಸಾವಿರ ರೂಪಾಯಿಗೂ ಅಧಿಕ ಹಣವನ್ನು ತೆಗೆದುಕೊಂಡು ಕಾಣಿಕೆ ಡಬ್ಬವನ್ನು ವೆಂಕಟಾಪುರ ಹೊಳೆಯಲ್ಲಿ ಎಸೆದು ಪರಾರಿಯಾಗಿದ್ದಾಗಿ ತಿಳಿದು ಬಂದಿದೆ.
ದೇವಸ್ಥಾನದ ಒಳ ನುಗ್ಗುವಾಗ ಗೋಡೆಯನ್ನು ಹಾರಿ ಬಂದಿರುವ ಕಳ್ಳರು ಹೊರ ಹೋಗುವಾಗ ಕಾಣಿಕೆ ಹುಂಡಿ ಭಾರವಿದ್ದ ಕಾರಣ ಹಿಂದಿನ ದ್ವಾರದ ಬೀಗವನ್ನು ಮುರಿದು ಅದೇ ದ್ವಾರದ ಮೂಲಕ ಪರಾರಿಯಾಗಿರುವುದು ಕಂಡು ಬಂದಿದೆ. ರವಿವಾರದ ಬೆಳಿಗ್ಗೆ ನಿತ್ಯ ಪೂಜೆಗೆಂದು ಬರುತ್ತಿದ್ದ ಪೂಜಾರಿ ದೇವಸ್ಥಾನಕ್ಕೆ ಬಂದಾಗ ಕಾಣಿಕೆ ಹುಂಡಿಯೂ ಇಲ್ಲದೆ, ಅದನ್ನು ಇಟ್ಟಂತಹ ಕಟ್ಟಿಗೆಯ ಪೀಠವೂ ಚೆಲ್ಲಾಪಿಲ್ಲಿಯಾಗಿತ್ತು. ಇನ್ನೊಂದು ಡಬ್ಬ ಹಾಗೂ ಹಿಂದುಗಡೆಯ ದ್ವಾರವೂ ಕೂಡ ತೆರೆದಿರುವುದನ್ನು ನೋಡಿ ಕೂಡಲೇ ದೇವಸ್ಥಾನದ ಕಮಿಟಿಯ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.