ಕಾರವಾರ:ಆಯಿಲ್ ಖರೀದಿಸುವ ನೆಪದಲ್ಲಿ ಬೈಕ್‌ನಲ್ಲಿ ಪೆಟ್ರೋಲ್ ಬಂಕ್ ಗೆ ಬಂದ ಖದೀಮರಿಬ್ಬರು ಕ್ಯಾಶ್ ಕೌಂಟರ್ ನಲ್ಲಿದ್ದ 1 ಲಕ್ಷ ರೂಪಾಯಿ ಎಗರಿಸಿ ಪರಾರಿಯಾಗಿರುವ ಘಟನೆ ಕುಮಟಾ ಪಟ್ಟಣದಲ್ಲಿ ನಡೆದಿದ್ದು, ಈ ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಪಟ್ಟಣದ ಮೂರೂರು ಕ್ರಾಸ್‌ನಲ್ಲಿರುವ ವಿ.ಎಂ.ಮಿರ್ಜಾನಕರ್ ಪೆಟ್ರೋಲ್ ಬಂಕ್‌ಗೆ ಬೈಕ್‌ನಲ್ಲಿ ಬಂದ ಕಳ್ಳರು ಆಯಿಲ್ ನೀಡುವಂತೆ ತಿಳಿಸಿದ್ದಾರೆ. ಆಯಿಲ್ ನೀಡುತ್ತಿದ್ದ ಸಮಯದಲ್ಲೇ ಮೂರು- ನಾಲ್ಕು ವಾಹನಗಳು ಡೀಸೆಲ್ಗಾಗಿ ಬಂಕ್‌ಗೆ ಬಂದಿವೆ. ಬಂಕ್ ಸಿಬ್ಬಂದಿ ಈ ವೇಳೆ, ಕ್ಯಾಶ್ ಬಾಕ್ಸ್ ಲಾಕ್ ಮಾಡದೇ ವಾಹನಗಳಿಗೆ ಡೀಸೆಲ್ ಹಾಕಲು ಮುಂದಾಗಿದ್ದಾರೆ.
ಆಯಿಲ್ ಖರೀದಿಗೆ ಬಂದು 1 ಲಕ್ಷ ಎಗರಿಸಿದ ಕಳ್ಳರು ಸಿಬ್ಬಂದಿ ಡೀಸೆಲ್ ಹಾಕುತ್ತಿರುವ ಸಮಯವನ್ನು ಗಮನಿಸಿದ ಕಳ್ಳರು ತಮ್ಮ ಚಾಣಾಕ್ಷತನದಿಂದ ಕ್ಯಾಶ್ ಬಾಕ್ಸ್ ನಲ್ಲಿದ್ದ ಒಂದು ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ. ಆದರೆ ವಾಹನಗಳಿಗೆ ಡೀಸೆಲ್ ತುಂಬಿ ಬಂದ ಬಳಿಕ ಕ್ಯಾಶ್ ಬಾಕ್ಸ್ ನೋಡಿದ ಸಿಬ್ಬಂದಿಗೆ ಶಾಕ್ ಕಾದಿತ್ತು. ಡ್ರಾ ನಲ್ಲಿ ಹಣವಿಲ್ಲದನ್ನು ಗಮನಿಸಿ, ಆತಂಕಗೊಂಡು ಬಂಕ್ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
ಓದಿ : 4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು, ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ರಮೇಶ್ ಜಾರಕಿಹೊಳಿ - VIDEO
ತಕ್ಷಣ ಬಂಕ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕುಮಟಾ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಬಂಕ್‌ಗೆ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪಡೆದು ಪರಿಶೀಲಿಸಿದ್ದಾರೆ. ಹೋಂಡಾ ಶೈನ್ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಕ್ಯಾಶ್ ಬಾಕ್ಸ್ ನಿಂದ ಹಣ ಕಳವು ಮಾಡುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ದೃಶ್ಯಾವಳಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.