ಕಾರವಾರ: ಕೊರೊನಾ ಲಾಕ್ಡೌನ್ ನಿಂದಾಗಿ ಪಕ್ಕದ ಗೋವಾದಲ್ಲಿ ಸಿಲುಕಿಕೊಂಡಿರುವ ಉತ್ತರ ಕನ್ನಡ ಸೇರಿದಂತೆ ಇತರ ಜಿಲ್ಲೆಯ ಕಾರ್ಮಿಕರಿಗೆ ಕೊನೆಗೂ ತವರು ಸೇರುವ ಭಾಗ್ಯ ದೊರೆತಿದೆ. ಸರ್ಕಾರದ ಆದೇಶದಂತೆ ಉತ್ತರಕನ್ನಡ ಜಿಲ್ಲಾಡಳಿತ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಂಡಿದ್ದು, ನಿತ್ಯ ಕೆಎಸ್ಆರ್ಟಿಸಿ ಬಸ್ ಮೂಲಕ ಕಳುಹಿಸಲಾಗುತ್ತಿದೆ.
ಹೌದು, ಕಳೆದ 43 ದಿನಗಳಿಂದ ಲಾಕ್ಡೌನ್ ನಲ್ಲಿ ಕೆಲಸ ಕಾರ್ಯವಿಲ್ಲದೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಸರ್ಕಾರ ಅವರ ಜಿಲ್ಲೆಗಳಿಗೆ ಕಳುಹಿಸಿತ್ತು. ಇದೀಗ ಪಕ್ಕದ ಗೋವಾ ರಾಜ್ಯದಲ್ಲಿದ್ದ ಕಾರ್ಮಿಕರನ್ನು ಆಯಾ ಜಿಲ್ಲೆಗಳಿಗೆ ಕರೆತರಲು ತಿರ್ಮಾನಿಸಿದ್ದು, ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿದವರನ್ನು ಕಾರವಾರದ ಮಾಜಾಳಿ ಗಡಿಭಾಗದ ಮೂಲಕ ಆರೋಗ್ಯ ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ.
ಗೋವಾದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯವರನ್ನು ತಪಾಸಣೆ ನಡೆಸಿ ಕೆಎಸ್ಆರ್ಟಿಸಿ ಬಸ್ ಮೂಲಕ ಮನೆ ಇಲ್ಲವೇ ಸರ್ಕಾರ ವ್ಯವಸ್ಥೆ ಮಾಡಿದ ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ, ಹೊರ ಜಿಲ್ಲೆಗಳಿಗೆ ತೆರಳುವವರು ಆ ಜಿಲ್ಲೆಯಿಂದ ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯುವ ಅವಶ್ಯಕತೆ ಇದ್ದು, ಇದು ಇದ್ದಲ್ಲಿ ಮಾತ್ರ ಗೋವಾದಿಂದ ಜಿಲ್ಲೆಯ ಗಡಿಭಾಗದೊಳಕ್ಕೆ ಕರೆದುಕೊಂಡು ತಪಾಸಣೆ ನಡೆಸಿ ಬಳಿಕ ಕೆಎಸ್ಆರ್ಟಿಸಿ ಮೂಲಕ ಕಳುಹಿಸಲಾಗುವುದು. ಹೊರ ರಾಜ್ಯಗಳಿಗೆ ತೆರಳುವವರು ಕೂಡ ರಿಸಿವಿಂಗ್ ಪರ್ಮಿಸನ್ ಇದ್ರೆ ಮಾತ್ರ ಜಿಲ್ಲೆ ಮೂಲಕ ಅವರ ರಾಜ್ಯಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ. ಅದು ಕೂಡ ಅವರೇ ಖಾಸಗಿ ವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕು.