ಕರ್ನಾಟಕ

karnataka

ETV Bharat / state

ಜ್ವರಕ್ಕೆ ಚಿಕಿತ್ಸೆ ಪಡೆಯಲು ತೆರಳಿದ ನವ ವಿವಾಹಿತೆಯ ದುರಂತ ಅಂತ್ಯ: ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

ಜ್ವರಕ್ಕೆ ಚಿಕಿತ್ಸೆ ಪಡೆಯಲು ಹೋದ ನವವಿವಾಹಿತೆ ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿರುವ ಆರೋಪ ಪ್ರಕರಣ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಯುವತಿ ಸಾವಿಗೆ ವೈದ್ಯರೇ ಕಾರಣ ಎಂದು ಮೃತ ಯುವತಿ ಸಂಬಂಧಿಕರು ಆರೋಪಿಸಿದ್ದಾರೆ.

The tragic end of a newly married she went to the treatment of fever
ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ

By

Published : May 29, 2022, 7:18 PM IST

Updated : May 30, 2022, 7:37 AM IST

ಕಾರವಾರ: ಆಕೆ ಕೆಲವೇ ದಿನಗಳ‌ ಹಿಂದೆಯಷ್ಟೇ ಕೌಟುಂಬಿಕ ಜೀವನಕ್ಕೆ ಕಾಲಿರಿಸಿದ್ದಳು. ಹಲವಾರು ಕನಸುಗಳನ್ನ ಹೊತ್ತು ಹೊಸ ಜೀವನ ಆರಂಭಿಸಿದ್ದಾಕೆಗೆ ವಿಧಿ ಬೇರೆ ದಾರಿ ತೋರಿಸಿದೆ. ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ವೈದ್ಯರ ನಿರ್ಲಕ್ಷ್ಯಕ್ಕೆ ಪ್ರಾಣ ಕಳೆದುಕೊಳ್ಳುವಂತಾಗಿದೆ. ಯುವತಿ ಸಾವಿಗೆ ವೈದ್ಯರೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ದುರಂತ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಕೇವಲ 24 ವರ್ಷದ ವಿವಾಹಿತೆ ಸನಾ ಮಾಂಜ್ರೇಕರ್ ಮೃತಳು. ತಾಲೂಕಿನ ಕಿನ್ನರ ಗ್ರಾಮದ ನಿವಾಸಿಯಾಗಿದ್ದ ಸನಾಗೆ ಕಡವಾಡ ಗ್ರಾಮದ ನಿವಾಸಿ ಸ್ವಪ್ನಿಲ್ ಮಾಂಜ್ರೇಕರ್ ಎಂಬಾತನೊಂದಿಗೆ ಮೇ10 ರಂದು ವಿವಾಹವಾಗಿತ್ತು. ಕಳೆದ 8 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು. ಇದಾದ ಬಳಿಕ ಶನಿವಾರ ಮಧ್ಯಾಹ್ನದ ಮತ್ತೆ ಜ್ವರ, ತಲೆನೋವು ಕಾಣಿಸಿಕೊಂಡ ಹಿನ್ನೆಲೆ ನಗರದ ಕಾಜುಭಾಗ್‌ನಲ್ಲಿರುವ ಖಾಸಗಿ ಆಸ್ಪತ್ರೆ ಸನಾಳನ್ನ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ದಾಖಲಾದ ನವ ವಿವಾಹಿತೆ ಸಾವು: ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

ಅಲ್ಲಿ ಸನಾಗೆ ಗ್ಲುಕೋಸ್ ಹಾಕಲಾಗಿದ್ದು, ರಾತ್ರಿ ವೇಳೆಗೆ ಕೊಂಚ ಚೇತರಿಸಿಕೊಂಡಿದ್ದಳು. ಇದಾದ ಬಳಿಕ ಊಟ ಮಾಡಲು ಮುಂದಾಗಿದ್ದಾಗ ಆಸ್ಪತ್ರೆಯ ಶುಶ್ರೂಷಕಿ ಸನಾಳಿಗೆ 4 ಇಂಜೆಕ್ಷನ್ ನೀಡಿದ್ದರು ಎನ್ನಲಾಗ್ತಿದೆ. ಆದರೆ ಇಂಜೆಕ್ಷನ್ ನೀಡಿದ ಕೆಲವೇ ಹೊತ್ತಿನಲ್ಲಿ ಆಕೆಗೆ ಹೊಟ್ಟೆಉರಿ ಕಾಣಿಸಿಕೊಂಡಿದ್ದು, ಉಸಿರಾಟದಲ್ಲೂ ಏರುಪೇರಾಗಿತ್ತು. ಕೂಡಲೇ ಪರಿಶೀಲಿಸಿದ ಆಸ್ಪತ್ರೆ ಸಿಬ್ಬಂದಿ ಐಸಿಯು ವ್ಯವಸ್ಥೆ ಇಲ್ಲದ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಸನಾಳನ್ನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲು ಪ್ರಯತ್ನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.

ಸನಾಳನ್ನ ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ತರುವಾಗಲೇ ಆಕೆಯ ಪರಿಸ್ಥಿತಿ ಗಂಭೀರವಾಗಿತ್ತು ಎನ್ನಲಾಗ್ತಿದೆ. ತಡರಾತ್ರಿ ವೇಳೆಗೆ ಆಸ್ಪತ್ರೆಗೆ ಕರೆತಂದಾಗ ಉಸಿರಾಟ ಸಮಸ್ಯೆ ಇದ್ದಿದ್ದರಿಂದಾಗಿ ಐಸಿಯುನಲ್ಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಪರಿಸ್ಥಿತಿ ಕೈಮೀರಿ ಹೋಗಿದ್ದರಿಂದಾಗಿ ಆಕೆ ಚಿಕಿತ್ಸೆಗೆ ಸಮರ್ಪಕವಾಗಿ ಸ್ಪಂದಿಸಿಲ್ಲವಾಗಿದ್ದು, ಭಾನುವಾರ ಬೆಳಗಿನ ಜಾವ 4 ಗಂಟೆ ವೇಳೆಗೆ ಸನಾ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು.

ಇದನ್ನೂ ಓದಿ:ಮತಾಂತರ ಆರೋಪ: ಚಿಕ್ಕಮಗಳೂರಲ್ಲಿ ಬಜರಂಗದಳ ಕಾರ್ಯಕರ್ತರಿಂದ ಹೋಟೆಲ್​ ಮೇಲೆ ದಾಳಿ

ಈ ಹಿನ್ನೆಲೆ ಕುಟುಂಬಸ್ಥರು ಖಾಸಗಿ ಆಸ್ಪತ್ರೆ ಎದುರು ಜಮಾವಣೆಯಾಗಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾರವಾರ ನಗರ ಠಾಣೆಗೆ ಆಗಮಿಸಿದ ಕುಟುಂಬದವರು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ನವವಿವಾಹಿತೆ ಸಾವನ್ನಪ್ಪಿದ್ದಾಗಿ ಆರೋಪಿಸಿ ದೂರು ನೀಡಿದ್ದಾರೆ. ಯುವತಿ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

Last Updated : May 30, 2022, 7:37 AM IST

ABOUT THE AUTHOR

...view details