ಕಾರವಾರ: ರಸ್ತೆಯಲ್ಲಿ ಸಿಕ್ಕ ಸಾವಿರಾರು ರೂಪಾಯಿ ಇದ್ದ ಪರ್ಸ್ ಅನ್ನು ವಾರಸುದಾರರಿಗೆ ಮರಳಿಸುವ ಮೂಲಕ ವಿದ್ಯಾರ್ಥಿನಿಯೋರ್ವಳು ಪ್ರಾಮಾಣಿಕತೆ ಮೆರೆದಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.
ರಸ್ತೆಯಲ್ಲಿ ಸಿಕ್ಕ ಪರ್ಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿನಿ! - ವಿದ್ಯಾರ್ಥಿನಿ ಗೀತಾಶ್ರೀ ಆರ್. ಹಿರೇಹಾರ
ರಸ್ತೆ ಮೇಲೆ ಒಂದು ರೂಪಾಯಿ ಸಿಕ್ಕರೂ ಇದು ತನ್ನದು ಎನ್ನುವ ಕಾಲವಿದು. ಅಂತಹದರಲ್ಲಿ 22,340 ರೂ. ನಗದು ಇರುವ ಪರ್ಸ್ ರಸ್ತೆಯಲ್ಲಿ ಸಿಕ್ಕಿದ್ದು ಅದನ್ನು ವಾರಸುದಾರರಿಗೆ ಮರಳಿಸುವ ಮೂಲಕ ವಿದ್ಯಾರ್ಥಿನಿಯೋರ್ವಳು ಪ್ರಾಮಾಣಿಕತೆ ಮೆರೆದಿದ್ದಾಳೆ.
ಪಟ್ಟಣದ ಪ್ರಭಾತನಗರ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗೀತಾಶ್ರೀ ಈಕೆಗೆ ತನ್ನ ಮನೆಯ ಸಮೀಪದ ರಸ್ತೆಯಲ್ಲಿ ತೆರಳುತ್ತಿರುವಾಗ ಪರ್ಸ್ ಒಂದು ಸಿಕ್ಕಿದೆ. ಆ ಪರ್ಸ್ ನಲ್ಲಿ 22,340 ರೂ. ನಗದು ಸೇರಿದಂತೆ ವಿವಿಧ ದಾಖಲಾತಿಗಳಿದ್ದವು. ಬಳಿಕ ಪರ್ಸ್ ನಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ, ಅರ್ಬನ್ ಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸುವ ನರಸಗೌಡರಿಗೆ ಪರ್ಸ್ ಸೇರಿದ್ದಾಗಿದೆ ಎಂದು ಖಚಿತಪಡಿಸಿಕೊಂಡಿದ್ದಾಳೆ. ನಂತರ ತಂದೆಯೊಂದಿಗೆ ವಿದ್ಯಾರ್ಥಿನಿ ತೆರಳಿ ಪರ್ಸ್ ಅನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾಳೆ.
ಈಕೆಯ ತಂದೆ ಆರ್.ಪಿ. ಹರಿಜನ ಶಿಕ್ಷಣ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಇವರ ಪ್ರಾಮಾಣಿಕತೆಗೆ ಪರ್ಸ್ ವಾರಸುದಾರ ನರಸಗೌಡ ಅಭಿನಂದಿಸಿದ್ದಾರೆ.