ಕರ್ನಾಟಕ

karnataka

ಸಿದ್ದಾಪುರದಲ್ಲಿ ಮಳೆಗಾಲದಲ್ಲಷ್ಟೇ ಸೃಷ್ಟಿಯಾಗೋ ಫಾಲ್ಸ್​​... ಭೋರ್ಗರೆವ ನೀರಲ್ಲಿ ಪ್ರವಾಸಿಗರ ಮಸ್ತಿ

By

Published : Aug 4, 2019, 1:45 PM IST

ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಸಿದ್ದಾಪುರದ ನಿಫಲಿ ಫಾಲ್ಸ್​ಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ತುಂಬಿ ಹರಿಯುತ್ತಿದೆ ನಿಫಲಿ ಫಾಲ್ಸ್

ಶಿರಸಿ: ಅತ್ಯಂತ ಸುರಕ್ಷಿತ ಹಾಗೂ ನೀರಲ್ಲಿ ಇಳಿದು ಆಟ ಆಡುತ್ತಾ ಮಜಾ ಮಾಡಬಲ್ಲ ಜಿಲ್ಲೆಯ ವಿಶಿಷ್ಟ ಫಾಲ್ಸ್​ ವೀಕ್ಷಣೆಗೆ ದಿನೇ ದಿನೆ ಜನಸಾಗರ ಹೆಚ್ಚುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವ ಫಾಲ್ಸ್​ಗೆ ಪ್ರತಿ ದಿನ ವಿವಿಧ ಜಿಲ್ಲೆಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಸಿದ್ದಾಪುರದಿಂದ ವಿಶ್ವ ಪ್ರಸಿದ್ಧ ಜೋಗ್​ಫಾಲ್ಸ್​ಗೆ ಹೋಗುವ ರಸ್ತೆಯಲ್ಲಿ ಸಿಗುವ ಈ ಫಾಲ್ಸ್​ ಹೊಸೂರು ಡ್ಯಾಂನಿಂದ ಉದ್ಭವವಾಗಿದೆ. ರಜಾ ದಿನಗಳಲ್ಲಿ 15-20 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಾರದ ದಿನದಲ್ಲಿ ಸಾವಿರಾರು ಜನರು ಭೇಟಿ ನೀಡುತ್ತಾರೆ.

ತುಂಬಿ ಹರಿಯುತ್ತಿದೆ ಫಾಲ್ಸ್

ಪ್ರಸಿದ್ಧ ಜೋಗಕ್ಕೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಿರುವುದು ವಿಶೇಷವಾಗಿದೆ. ಮಳೆಗಾಲದಲ್ಲಿ ಹೊಸೂರು ಡ್ಯಾಂ​ ತುಂಬಿ ಹೊರಬಂದ ನೀರು ಚಿರೆ ಕಲ್ಲಿನ ಇಳಿಜಾರು ಜಾಗದಲ್ಲಿ ಹರಿದು ಈ ಫಾಲ್ಸ್​ ರೂಪುಗೊಂಡಿದೆ. ಸುಮಾರು 200 ಮೀಟರ್​ ಉದ್ದ ಹಾಗೂ 25-30 ಮೀಟರ್​ನಷ್ಟು ಅಗಲವಾಗಿ ಈ ಫಾಲ್ಸ್​ ಹರಿಯುತ್ತದೆ.

ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇದು ಕೇವಲ 3 ರಿಂದ 4 ತಿಂಗಳು ಮಾತ್ರ ನೀರಿರುವ ಫಾಲ್ಸ್​ ಇದಾಗಿದ್ದು, ಮಳೆಗಾಲ ಮುಗಿದ ಮೇಲೆ ಡ್ಯಾಂ ನೀರು ಇಳಿಮುಖವಾಗುವುದರಿಂದ ನೀರಿನ ಹರಿವು ಇರುವುದಿಲ್ಲ.

ಜೋಗ ಹಾಗೂ ಇತರೆ ಫಾಲ್ಸ್​ಗಳ ಸಮೀಪಕ್ಕೆ ಹೋಗಲು ಬಿಡುವುದಿಲ್ಲ. ‌ಆದರೆ ಈ ಫಾಲ್ಸ್​ ಬಹಳ ಸುರಕ್ಷಿತವಾಗಿದ್ದು ಸುಲಭವಾಗಿ ನೀರಿನಲ್ಲಿ ಇಳಿದು ಆಡಬಹುದು. ಯಾವುದೇ ಅಪಾಯವಿಲ್ಲ ಎನ್ನುವುದು ಪ್ರವಾಸಿಗರ ಮಾತಾಗಿದೆ.

ABOUT THE AUTHOR

...view details