ಕಾರವಾರ (ಉತ್ತರಕನ್ನಡ): ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಉತ್ತರಕನ್ನಡ ಜಿಲ್ಲೆಯ ಜನರು ವಿವಿಧ ರೀತಿಯಲ್ಲಿ ಅಭಿಯಾನ ಮಾಡಿದ್ದರು. ಈ ಕುರಿತು ಜನಪ್ರತಿನಿಧಿಗಳೂ ಸದನದಲ್ಲಿ ಚರ್ಚೆ ನಡೆಸಿದ್ದು, ಇದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವೇಳೆ, ಜಿಲ್ಲೆಗೆ ಖುದ್ದು ಭೇಟಿ ನೀಡಿ ಆಸ್ಪತ್ರೆ ನಿರ್ಮಾಣದ ಕುರಿತು ಪರಿಶೀಲಿಸುವುದಾಗಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಭರವಸೆ ನೀಡಿದ್ದರು. ಅಂತೆಯೇ ಇಂದು ಜಿಲ್ಲೆಗೆ ಆಗಮಿಸಿದ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಭೌಗೋಳಿಕವಾಗಿ ವಿಶೇಷತೆಯನ್ನು ಹೊಂದಿರುವ, ಪ್ರವಾಸೋದ್ಯಮದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆ ಉತ್ತರಕನ್ನಡ. ಇಷ್ಟೆಲ್ಲ ಇದ್ದರೂ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ ಎನ್ನುವ ಕೂರಗು ಇಲ್ಲಿನ ಜನರಿಗಿತ್ತು. ಜಿಲ್ಲೆಗೆ ಒಂದಾದರೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ಕೊಡಿ ಎಂದು ಜನರು ವಿವಿಧ ರೀತಿಯಲ್ಲಿ ಹೋರಾಟ, ಪ್ರತಿಭಟನೆಗಳನ್ನು ಮಾಡಿದ್ದರು. ಕೊನೆಗೂ ಜನರ ಹೋರಾಟದ ಫಲವಾಗಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆದಿದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಚಿವರಿಂದ ಸ್ಥಳ ಪರಿಶೀಲನೆ : ಮೊದಲು ಕಾರವಾರದ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ ಸಚಿವ ಸುಧಾಕರ್ 150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 450 ಬೆಡ್‌ಗಳ ಮೆಡಿಕಲ್ ಕಾಲೇಜು ಆಸ್ಪತ್ರೆಯ ನೂತನ ಕಟ್ಟಡವನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್, ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ಉನ್ನತ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.