ಶಿರಸಿ:ಕಳೆದ ಅಗಸ್ಟ್ ತಿಂಗಳ ಮೊದಲ ವಾರದಲ್ಲಿ ಉಂಟಾದ ನೆರೆ ಹಾವಳಿಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಒಟ್ಟು 9925 ಹೆಕ್ಟೇರ್ ಕೃಷಿ ಪ್ರದೇಶ ಹಾನಿಯಾಗಿದ್ದು, ಅಂದಾಜು 58 ಕೋಟಿ ರೂ. ನಷ್ಟ ಉಂಟಾಗಿದೆ. ಆದರೆ, ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಸುಮಾರು 7 ಕೋಟಿ ರೂ. ಮಾತ್ರ ಪರಿಹಾರಕ್ಕೆ ಅರ್ಹವಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ 504 ಗ್ರಾಮಗಳಲ್ಲಿ ಒಟ್ಟು 56.07 ಕೋಟಿ ರೂ.ಗಳಷ್ಟು ಹಾನಿಯ ಮಾಹಿತಿಯನ್ನು ಕೃಷಿ ಇಲಾಖೆ ಸರ್ಕಾರಕ್ಕೆ ನೀಡಿತ್ತು. ಆದರೆ ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ಕೇವಲ 7.14 ಕೋಟಿ ರೂ.ಗಳಷ್ಟೇ ನಷ್ಟ ಸಂಭವಿಸಿದೆ. ಹೀಗಾಗಿ ಈ ನಿಯಮಾವಳಿಯ ಪ್ರಕಾರ ನೀಡಬಹುದಾದ ನಷ್ಟದ ಮೊತ್ತಕ್ಕೂ ನಿಜವಾದ ನಷ್ಟದ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಉಂಟಾಗಿದೆ ಎಂದಿದ್ದಾರೆ.
ಉತ್ತರ ಕನ್ನಡದಲ್ಲಿ ಉಂಟಾದ ನೆರೆ ಜಿಲ್ಲೆಯ 11 ತಾಲೂಕುಗಳಲ್ಲಿ ಕಬ್ಬು 600 ಹೆಕ್ಟೇರ್, ಮೆಕ್ಕೆಜೋಳ 1976 ಹೆ, ಭತ್ತ 7299 ಹೆ, ಹತ್ತಿ 50 ಹೆ. ಸೇರಿ ಒಟ್ಟು 9928 ಹೆ. ಜಲಾವೃತವಾಗಿತ್ತು. ಕಾರವಾರ 425 ಹೆ, ಅಂಕೋಲಾ 1260 ಹೆ, ಕುಮಟಾ 1300 ಹೆ, ಹೊನ್ನಾವರ 310 ಹೆ, ಭಟ್ಕಳ 30 ಹೆ, ಶಿರಸಿ 1435 ಹೆ, ಯಲ್ಲಾಪುರ 219 ಹೆ, ಮುಂಡಗೋಡ 2095 ಹೆ, ಸಿದ್ದಾಪುರ 648 ಹೆ, ಹಳಿಯಾಳ 1690 ಹೆ. ಹಾಗೂ ಜೊಯಿಡಾದಲ್ಲಿ 523 ಹೆ. ಪ್ರದೇಶದಲ್ಲಿ ಹಾನಿ ಸಂಭವಿಸಿತ್ತು.
ಮಹಾಮಳೆಗೆ ಜಿಲ್ಲೆಯ ಕೃಷಿ ಕ್ಷೇತ್ರ ತತ್ತರಿಸಿದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಆದರೆ, ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ. ಈಗಾಗಲೇ ಜಿಲ್ಲೆಯ 30 ಸಾವಿರ ರೈತರ ನೊಂದಣಿ ಆಗಿದೆ. ಕೇಂದ್ರ ಸರ್ಕಾರವು 1200 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದರಲ್ಲಿ ಆದ್ಯತೆ ಮೇರೆಗೆ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು' ಎಂದು ಉಪ ಕೃಷಿ ನಿರ್ದೇಶಕ ಟಿ ಹೆಚ್ ನಟರಾಜ ಮಾಹಿತಿ ನೀಡಿದ್ದಾರೆ.