ಕಾರವಾರ :ಮುಖ್ಯಮಂತ್ರಿಗಳಾಗಿ ಅಧಿಕಾರಿ ವಹಿಸಿಕೊಂಡ ಮಾರನೇ ದಿನವೇ ಪ್ರವಾಹದಿಂದ ಸಾಕಷ್ಟು ಹಾನಿಗೊಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಗೆ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದ್ದರು. ಸಿಎಂ ಬೊಮ್ಮಾಯಿಯವರ ಭೇಟಿ ಇದೀಗ ಜಿಲ್ಲೆಯಲ್ಲಿ ಕೆಲ ಪ್ರದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿಯೇ ಪ್ರವಾಹದಿಂದ ಊರಿಗೆ ಊರೇ ಮುಳುಗಿ ಹೆಚ್ಚಿನ ಹಾನಿಯಾಗಿದ್ದ ಕಾರವಾರದ ಕದ್ರಾ ಭಾಗಕ್ಕೆ ಸಿಎಂ ಬಾರದೇ ನಿರ್ಲಕ್ಷ ವಹಿಸಿದ್ದು, ಸಂತ್ರಸ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹಲವು ಯೋಜನೆಗಳನ್ನ ಘೋಷಣೆ ಮಾಡಿದ್ದ ಸಿಎಂ ಮರು ದಿನವೇ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದರು. ಇನ್ನು, ಸಿಎಂ ಜಿಲ್ಲೆಯ ಭೇಟಿ ಬೆನ್ನಲ್ಲೇ ಇದೀಗ ಜನರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.
ಆಕ್ರೋಶ ಹೊರ ಹಾಕುತ್ತಿರುವ ಕಾಳಿನದಿ ನೆರೆ ಸಂತ್ರಸ್ತರು ಸಿಎಂ ನೆರೆ ಹಾನಿ ಪ್ರದೇಶ ವೀಕ್ಷಣೆಗೆ ಕೇವಲ ಜಿಲ್ಲೆಯ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನ ಕೆಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಆದರೆ, ಜಿಲ್ಲೆಯಲ್ಲಿಯೇ ಕಾಳಿ ನದಿ ಪ್ರವಾಹದಿಂದ ಅತಿ ಹೆಚ್ಚು ಹಾನಿಯಾಗಿದ್ದ ಹತ್ತಾರು ಗ್ರಾಮಗಳು ಮುಳುಗಡೆಯಾಗಿ, ಮನೆಗಳು ಕೊಚ್ಚಿಹೋಗಿ ಜನರು ಪರದಾಡುವಂತಾಗಿದೆ. ಅದರಲ್ಲೂ ಜಿಲ್ಲಾಕೇಂದ್ರ ಸಮೀಪದಲ್ಲಿಯೇ ಪ್ರವಾಹವಾಗಿದ್ದರೂ ಸಿಎಂ ಅಂಕೋಲಾ, ಯಲ್ಲಾಪುರಕ್ಕೆ ಭೇಟಿ ನೀಡಿ ವಾಪಸ್ ಹೋಗಿದ್ದು, ಕಾಳಿ ನದಿ ಪಾತ್ರದ ಜನರ ಮೇಲೆ ಯಾಕೆ ನಿರ್ಲಕ್ಷ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು, ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಜಲಾಶಯದ ಸಮೀಪದಲ್ಲಿದ್ದ ಮಲ್ಲಾಪುರ, ಕರ್ನಿಪೇಟೆ, ಟೌನ್‌ಶಿಪ್, ಗಾಂಧಿನಗರ ಸೇರಿ ಹಲವು ಗ್ರಾಮಗಳಲ್ಲಿ ಅಪಾರ ಹಾನಿಯಾಗಿತ್ತು. ಪ್ರವಾಹದಿಂದ 25ಕ್ಕೂ ಅಧಿಕ ಮನೆಗಳು ಕೊಚ್ಚಿ ಹೋಗಿದ್ದವು. ಇನ್ನು, ಗಂಗಾವಳಿ ನದಿ ಪ್ರವಾಹ ನೈಸರ್ಗಿಕವಾಗಿ ಆಗಿದ್ದರೆ, ಕಾಳಿ ನದಿ ಪ್ರವಾಹ ಕೆಪಿಸಿ ಅಧಿಕಾರಿಗಳ ನಿರ್ಲಕ್ಷದಿಂದಲೇ ಆಗಿದೆ ಎನ್ನುವ ಆರೋಪ ಸಹ ಕೇಳಿ ಬಂದಿತ್ತು.
ವಿದ್ಯುತ್ ಉತ್ಪಾದನೆಗೆ ತೊಂದರೆ ಆಗದಂತೆ ನೀರನ್ನ ಜಲಾಶಯದಲ್ಲಿ ಶೇಖರಿಸಿಟ್ಟುಕೊಂಡು ಒಮ್ಮೆಲೇ ಕೊನೆಯ ವೇಳೆ ನೀರು ಹೊರಬಿಟ್ಟಿದ್ದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇಪದೆ ಎದುರಾಗುತ್ತಿರುವ ಪ್ರವಾಹಕ್ಕೆ ಶಾಶ್ವತ ಪರಿಹಾರ ಅಗತ್ಯವಿದ್ದು, ಸಿಎಂ ಆಗಮಿಸಿದ್ದರೆ ಅವರ ಬಳಿ ಮನವಿ ಮಾಡಿಕೊಳ್ಳಬೇಕು ಎಂದು ಜನರು ಕಾಯುತ್ತಿದ್ದರು. ಆದರೆ, ಸಿಎಂ ಆಗಮಿಸದೇ ಹಾಗೇ ಹೋಗಿರುವುದು ಸರಿಯಾದುದ್ದಲ್ಲ ಅನ್ನುವುದು ನಿರಾಶ್ರಿತರ ವಾದವಾಗಿದೆ.
ಇದನ್ನೂ ಓದಿ : ಕೋವಿಡ್ ಚಿಕಿತ್ಸೆಯಲ್ಲಿ 'ಅಶ್ವಗಂಧ' ಬಳಕೆ: ಕ್ಲಿನಿಕಲ್ ಪ್ರಯೋಗ ನಡೆಸಲಿರುವ INDIA -UK
ಸದ್ಯ ಪ್ರವಾಹದಿಂದ ಹಾನಿಗೊಳಗಾದ ಕದ್ರಾ ಜಲಾಶಯದ ಸುತ್ತಮುತ್ತಲಿನ ಪ್ರದೇಶಕ್ಕೆ ಸಿಎಂ ಬಂದಿಲ್ಲ ಎನ್ನುವುದು ದೊಡ್ಡ ಮಟ್ಟದಲ್ಲಿಯೇ ಆಕ್ರೋಶ ಹೊರ ಹಾಕುತ್ತಿದ್ದರೆ, ಇನ್ನೊಂದೆಡೆ ಇದರ ಲಾಭ ಪಡೆಯಲು ಕಾಂಗ್ರೆಸ್ ಸಹ ಮುಂದಾಗಿದೆ. ಸೋಮವಾರ ಕಾಳಿ ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಲು ಮುಂದಾಗುವ ಮೂಲಕ ಬಿಜೆಪಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ.