ಕಾರವಾರ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ "ಆಜಾದಿ ಕಾ ಅಮೃತ್ ಮಹೋತ್ಸವ" ಆಚರಿಸಲಾಗುತ್ತಿದ್ದು, ದೇಶಾದ್ಯಂತ ಭಾರತೀಯ ನೌಕಾಪಡೆಯಿಂದ 75 ದ್ವೀಪಗಳಲ್ಲಿ ಧ್ವಜಾರೋಹಣ ನಡೆಸಲಾಗಿದೆ. ಅದರಂತೆ ಕಾರವಾರದ ನೌಕಾನೆಲೆ ನಿರ್ಬಂಧಿತ ಅಂಜುದೀವ್ ದ್ವೀಪದಲ್ಲಿಯೂ ಕೂಡ ಇತಿಹಾಸದಲ್ಲೇ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿ ಗೌರವ ಸಲ್ಲಿಸಲಾಗಿದೆ.
ಸರಣಿ ಕಾರ್ಯಕ್ರಮಗಳಿಗೆ ಚಾಲನೆ:
ಭಾರತ ಸರ್ಕಾರ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಿಸಲು ಕರೆ ನೀಡಿದೆ. ಅದರಂತೆ ಭಾರತೀಯ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳು ದೇಶಾದ್ಯಂತ ಸರಣಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ನವ ದೆಹಲಿಯ ಕೊಠಾರಿ ಕ್ರೀಡಾಂಗಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಕಾರ್ಯಕ್ರಮಗಳಿಗೆ ಶುಕ್ರವಾರ ಚಾಲನೆ ನೀಡಿದರು.
ಅಂಜುದೀವ್ ದ್ವೀಪದಲ್ಲಿ ಧ್ವಜಾರೋಹಣ ಅಂಜುದೀವ್ ದ್ವೀಪದಲ್ಲಿ ಧ್ವಜಾರೋಹಣ:
ಬಳಿಕ ಕಾರವಾರದ ಕದಂಬ ನೌಕಾನೆಲೆ ವ್ಯಾಪ್ತಿಯ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಮಹೇಶ್ ಸಿಂಗ್ ಅಂಜುದೀವ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು.
ಸ್ವಾತಂತ್ರ್ಯದ ನಂತರವೂ ಪೋರ್ಚುಗೀಸರ ವಶದಲ್ಲಿದ್ದ ದ್ವೀಪ:
ಅಂಜುದೀವ್ ದ್ವೀಪ ಸಾಕಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿದೆ. 1947ರಲ್ಲಿ ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರವೂ 1.5 ಚದರ ಕಿಲೋ ಮೀಟರ್‌ಗಳಷ್ಟು ವಿಸ್ತಾರವಾದ ಅಂಜುದೀವ್ ದ್ವೀಪವು 1961ರವರೆಗೂ ಪೋರ್ಚುಗೀಸರ ವಶದಲ್ಲಿತ್ತು. ಪೋರ್ಚುಗೀಸರು ಈ ದ್ವೀಪವನ್ನು 1498ರಲ್ಲೇ ತಮ್ಮ ವಶಕ್ಕೆ ಪಡೆದಿದ್ದರು. ಕೋಟೆ ಮತ್ತು ಚರ್ಚ್ ಅನ್ನು ಅಂಜುದೀವ್ ದ್ವೀಪದಲ್ಲಿ ನಿರ್ಮಿಸಿದ ಪೋರ್ಚುಗೀಸರು, ಗೋವಾವನ್ನು ವಶಪಡಿಸಿಕೊಳ್ಳುವುದನ್ನು ಈ ದ್ವೀಪದಿಂದಲೇ ಪ್ರಾರಂಭಿಸಿದ್ದರು.
ಆಪರೇಷನ್ ವಿಜಯ್ ಮೂಲಕ ದ್ವೀಪ ವಶಕ್ಕೆ:
ಅಂಜುದೀವ್ ದ್ವೀಪವನ್ನು ವಶಪಡಿಸಿಕೊಳ್ಳಲು ಭಾರತೀಯ ನೌಕಾಪಡೆಯು ಆಗಿನ ಲೆಫ್ಟಿನೆಂಟ್ ಕಮಾಂಡರ್ ಅರುಣ್ ಆಡಿಟ್ಟೊ ನೇತೃತ್ವದಲ್ಲಿ 'ಆಪರೇಷನ್ ವಿಜಯ್' ಅನ್ನು 1961ರ 18ನೇ ಡಿಸೆಂಬರ್ರಂದು ಕೈಗೊಂಡಿತು. ಈ ಸಂದರ್ಭದಲ್ಲಿ ಐಎನ್ಎಸ್ ಮೈಸೂರು ಮತ್ತು ಐಎನ್ಎಸ್ ತ್ರಿಶೂಲ್ ಯುದ್ಧ ನೌಕೆಗಳು ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಈ ವೇಳೆ ಅಂತಿಮವಾಗಿ ಏಳು ನಾವಿಕರು ಪ್ರಾಣ ತ್ಯಾಗವನ್ನು ಮಾಡಿದರೆ, ಇಬ್ಬರು ಅಧಿಕಾರಿಗಳು ಮತ್ತು 17 ನಾವಿಕರು ಗಾಯಗೊಂಡಿದ್ದರು. ನೌಕಾ ಕಾರ್ಯಪಡೆ ಅಂಜುದೀವ್ ದ್ವೀಪವನ್ನು ಕೊನೆಗೂ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ನಿರ್ಬಂಧಿತ ಪ್ರದೇಶ?
ಅಂಜುದೀವ್ ದ್ವೀಪವನ್ನು 1991ರಲ್ಲಿ ಕದಂಬ ನೌಕಾನೆಲೆ ವ್ಯಾಪ್ತಿಗೆ ಹಸ್ತಾಂತರಿಸಲಾಗಿದೆ. 2000ರ ನಂತರ ಕದಂಬ ನೌಕಾನೆಲೆ ಭದ್ರತಾ ದೃಷ್ಟಿಯಿಂದ ದ್ವೀಪಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿಷೇಧ ಮಾಡಿದೆ. ಈ ಹಿಂದೆ ಇಲ್ಲಿ ಮೀನುಗಾರರ ಆರಾಧ್ಯ ದೈವ ಆರ್ಯದುರ್ಗಾ ದೇವಾಲಯ ಇದ್ದ ಕಾರಣ ಪೂಜೆ ಮತ್ತು ಚರ್ಚ್ ಇದ್ದುದರಿಂದ ಕ್ರಿಶ್ಚಿಯನ್ನರು ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಇದೀಗ ಇಲ್ಲಿಗೆ ತೆರಳಲು ಸಂಪೂರ್ಣ ನಿಷೇಧ ಹೇರಲಾಗಿದೆ. ಇತಿಹಾಸದಲ್ಲಿಯೇ ಮೊದಲ ಬಾರಿ ಈ ರೀತಿ ವಿಶೇಷ ಕಾರ್ಯಕ್ರಮದ ಮೂಲಕ ಭಾರತೀಯ ನೌಕಾಪಡೆಯಿಂದ ತ್ರೀವರ್ಣ ಧ್ವಜವನ್ನು ದ್ವೀಪದಲ್ಲಿ ಹಾರಿಸಲಾಗಿದೆ.