ಕಾರವಾರ (ಉತ್ತರ ಕನ್ನಡ):ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡಗಳನ್ನು ಜನಪ್ರತಿನಿಧಿಗಳು ಉದ್ಘಾಟಿಸುವುದು ಸಾಮಾನ್ಯ. ಆದರೆ, ನಗರದಲ್ಲಿ ಒಂದೇ ಕಾಮಗಾರಿಯನ್ನು ಎರಡೆರಡು ಬಾರಿ ಉದ್ಘಾಟಿಸಿದ ಘಟನೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಾಲಿ, ಮಾಜಿ ಶಾಸಕರಿಂದ ಒಂದೇ ಕಾಮಗಾರಿ ಎರಡೆರಡು ಬಾರಿ ಉದ್ಘಾಟನೆ ನಗರದ ನಂದನಗದ್ದಾ ಬಡಾವಣೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 27 ಲಕ್ಷ ರೂ. ಅನುದಾನದಲ್ಲಿ ಮೀನು ಮಾರುಕಟ್ಟೆ ಕಟ್ಟಡವನ್ನು ನಿರ್ಮಿಸಲಾಗಿತ್ತು. ಬುಧವಾರ ಶಾಸಕಿ ರೂಪಾಲಿ ನಾಯ್ಕ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ್ ಹೆಗಡೆ ಮೀನುಗಾರಿಕಾ ಇಲಾಖೆ ಹಮ್ಮಿಕೊಂಡಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಕಟ್ಟಡವನ್ನು ಉದ್ಘಾಟಿಸಿದ್ದರು.
ಕಟ್ಟಡ ಉದ್ಘಾಟನೆ ಮಾಡಿದ ಬೆನ್ನಲ್ಲೇ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಗುರುವಾರ ಮತ್ತೊಮ್ಮೆ ರಿಬ್ಬನ್ ಕತ್ತರಿಸಿ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಸ್ಥಳೀಯ ಮೀನುಗಾರರು, ಕೆಲ ನಗರಸಭಾ ಸದಸ್ಯರು, ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಗುರುವಾರ ಕಾರ್ಯಕ್ರಮ ಮಾಡಿ ಕಟ್ಟಡಕ್ಕೆ ಚಾಲನೆ ನೀಡಲಾಗಿದ್ದು, ಒಂದೇ ಕಟ್ಟಡಕ್ಕೆ ಎರಡು ಬಾರಿ ಉದ್ಘಾಟನೆ ಮಾಡಿದಂತಾಗಿದೆ.
ಓದಿ:ಕಾರವಾರದಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ: ಕತ್ತಲೆ ಕೋಣೆಯಲ್ಲಿಡುತ್ತಿರುವ ಆರೋಪ!
ಹಾಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಈ ಹಿಂದಿನಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ತನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಶಾಸಕಿ ಉದ್ಘಾಟಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸೈಲ್ ಆರೋಪಿಸಿದ್ದರು. ಇವರಿಬ್ಬರ ಹಾಗೂ ಇವರ ಬೆಂಬಲಿಗರ ನಡುವಿನ ಈ ಗುದ್ದಾಟ ತಾರಕಕ್ಕೇರಿ ಕೆಲ ದಿನಗಳಿಂದ ತಣ್ಣಗಾದಂತೆ ಕಂಡುಬಂದಿತ್ತು. ಇದೀಗ ಒಂದೇ ಕಾಮಗಾರಿಗೆ ಎರಡು ಬಾರಿ ಉದ್ಘಾಟನೆ ಮಾಡುವ ಮೂಲಕ ಮತ್ತೆ ಇಬ್ಬರ ನಡುವಿನ ರಾಜಕೀಯ ಗುದ್ದಾಟ ಸುದ್ದಿಯಲ್ಲಿದೆ.
ಕಟ್ಟಡ ಉದ್ಘಾಟಿಸಿ ಮಾತನಾಡಿದ ಸತೀಶ್ ಸೈಲ್, 1946ರಲ್ಲಿ ನಂದನಗದ್ದಾ ಬಡವಾಣೆಯ ಖಾಸಗಿ ಜಾಗದಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗಿತ್ತು. ಖಾಸಗಿ ಜಾಗದಲ್ಲಿ ಇದೆ ಎನ್ನುವ ಕಾರಣಕ್ಕೆ ಸರ್ಕಾರದಿಂದ ಕಟ್ಟಡ ಹೊಸದಾಗಿ ನಿರ್ಮಿಸಲು ಅನುದಾನ ಕೊಟ್ಟಿರಲಿಲ್ಲ. ಆದರೆ, ಕಳೆದ ಬಾರಿ ನನ್ನ ಅವಧಿಯಲ್ಲಿ 27 ಲಕ್ಷ ರೂ. ಅನುದಾನ ಕೊಡಿಸಿದ್ದೆ. ಅಲ್ಲದೇ ಹೊಸದಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರಿಂದ ತಾತ್ಕಾಲಿಕವಾಗಿ ಮೀನುಗಾರ ಮಹಿಳೆಯರಿಗೆ ಕೂರಲು ಅವಕಾಶ ಮಾಡಿಕೊಡಿಸಿದ್ದೆ. ಇದೀಗ ಕಟ್ಟಡ ನಿರ್ಮಾಣವಾಗಿದ್ದು, ಬುಧವಾರ ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿ ಹೋಗಿದ್ದರು. ಸ್ಥಳೀಯ ಮೀನುಗಾರರು ನನಗೆ ಮತ್ತೆ ಬಂದು ಉದ್ಘಾಟಿಸುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಮತ್ತೊಮ್ಮೆ ಉದ್ಘಾಟಿಸಿದ್ದೇನೆ ಎಂದು ಹೇಳಿದ್ದಾರೆ.