ಭಟ್ಕಳ (ಉತ್ತರ ಕನ್ನಡ) : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೋರ್ವ ತನ್ನ ಪತ್ನಿಯನ್ನೇ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರದ ತೇರ್ನಾಮಕ್ಕಿ ಸಬ್ಬತ್ತಿ ಕ್ರಾಸ್ನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ನಂದಿನಿ ಲೋಕೇಶ ನಾಯ್ಕ (30) ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹವೇ ಹತ್ಯೆಗೆ ಮೂಲ ಕಾರಣ ಎಂದು ತಿಳಿದು ಬಂದಿದ್ದು, ಮೃತರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಪತಿಯು ಮುರುಡೇಶ್ವರದ ನಾಡವರ ಕೇರಿ ನಿವಾಸಿಯಾಗಿದ್ದು, ಶಿಲ್ಪಿ ಕೆಲಸ ಮಾಡಿಕೊಂಡಿದ್ದಾನೆ. ಈತ ಕಳೆದ 3 ದಿನಗಳ ಹಿಂದಷ್ಟೇ ಸಬ್ಬತ್ತಿ ಕ್ರಾಸ್ನಲ್ಲಿರುವ ಮನೆಯೊಂದರಲ್ಲಿ ತನ್ನ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸಿಸುತ್ತಿದ್ದ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡ - ಹೆಂಡತಿ ನಡುವೆ ಗಲಾಟೆ ನಡೆದಿದ್ದು, ಬಳಿಕ ಕೋಪಗೊಂಡ ಪತಿಯು ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಗಾಯಗೊಂಡ ಮಹಿಳೆ ರಕ್ತದ ಮಡುವಿನಲ್ಲಿಯೇ ಮನೆಯಿಂದ ಹೊರಗೆ ಓಡಿ ಬಂದು ಬಿದ್ದಿದ್ದಾಳೆ. ಇದನ್ನು ಗಮನಿಸಿದ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸಿಪಿಐ ವಸಂತ ಕಾಯ್ಕಿಣಿ ಮತ್ತು ಅವರ ತಂಡ ಬಲೆ ಬೀಸಿ ಆರೋಪಿ ಲೋಕೇಶ ನಾಯ್ಕನನ್ನು ಖಾಸಗಿ ಹೋಟೆಲ್ವೊಂದರಲ್ಲಿ ವಶಕ್ಕೆ ಪಡೆದಿದ್ದಾರೆ.
ಪಿಎಸ್ಐ ಮಂಜುನಾಥ್ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿದ್ದರು. ತಾಯಿಯನ್ನು ಕಳೆದುಕೊಂಡ ಮಕ್ಕಳು ಹಾಗೂ ಕುಟುಂಬದವರ ರೋದನೆ ಮುಗಿಲು ಮುಟ್ಟಿತ್ತು. ಎಸ್ ಪಿ ವಿಷ್ಣುವರ್ಧನ್, ಡಿವೈಎಸ್ಪಿ ಶ್ರೀಕಾಂತ ಕೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಕೌಟುಂಬಿಕ ಕಲಹ : ಪತ್ನಿ, ಮಗಳ ಹತ್ಯೆಗೈದ ಗಂಡ ; ಅವಳಿ ಕೊಲೆಗೆ ಬೆಚ್ಚಿಬಿದ್ದ ಅಸ್ಸಾಂ
ಇತ್ತೀಚಿನ ಪ್ರಕರಣ- ಪತ್ನಿ ಕೊಲೆಗೈದ ಪತಿ : ಕಳೆದ 5 ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಪತಿರಾಯನೋರ್ವ ಪತ್ನಿಯನ್ನು ಕೊಲೆಗೈದಿರುವ ಘಟನೆ ನಡೆದಿತ್ತು. ಮೃತಳನ್ನು ಪದ್ಮಾಕ್ಷಿ (40) ಎಂದು ಗುರುತಿಸಲಾಗಿದೆ. ಕಿರಗುಂದ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ-ಪದ್ಮಾಕ್ಷಿ ದಂಪತಿ ಮಧ್ಯೆ ಆಗಾಗ್ಗೆ ಕುಡಿತದ ಚಟ ಹಾಗೂ ಅನೈತಿಕ ಸಂಬಂಧದ ವಿಚಾರವಾಗಿ ಗಲಾಟೆ ನಡೆಯುತ್ತಲೇ ಇತ್ತು ಎಂಬ ಮಾತುಗಳು ಕೇಳಿಬಂದಿವೆ. ಶುಕ್ರವಾರ (ಅಕ್ಟೋಬರ್ 13) ರಾತ್ರಿ ಕಂಠಪೂರ್ತಿ ಕುಡಿದು ಬಂದ ಪತಿ ಚಂದ್ರ, ಪತ್ನಿ ಜೊತೆ ಜಗಳವಾಡಿದ್ದಾನೆ. ಮನೆಯಲ್ಲಿದ್ದ ಕೊಡಲಿಯಿಂದ ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದ.
ಇದನ್ನೂ ಓದಿ :ಅನೈತಿಕ ಸಂಬಂಧದ ಶಂಕೆ : ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ, ಮಹಿಳೆ ಸಾವು