ಭಟ್ಕಳ: ರಾಜ್ಯದ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಸಂತ್ರಸ್ತರ ರಕ್ಷಣೆಗೆ ಬಾರದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದಯನೀಯ ಸ್ಥಿತಿಯಲ್ಲಿವೆ ಎಂದುಕರ್ನಾಟಕದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಲೇವಡಿ ಮಾಡಿದರು.
ನಗರದ ವೆಲ್ಫೇರ್ ಆಸ್ಪತ್ರೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂತ್ರಸ್ತರಿಗೆ ಸರಿಯಾದ ಮೂಲಸೌಕರ್ಯ ನೀಡದ ರಾಜ್ಯ ಸರ್ಕಾರ ಅಸಹಾಯಕವಾಗಿದೆ.ಪರಿಹಾರ ನೀಡದ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಗಂಜಿ ಕೇಂದ್ರಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬ ನರಕ ಯಾತನೆ ಅನುಭವಿಸುತ್ತಿದೆ. ಬೆಳಗಾವಿಯ ಗಂಜಿ ಕೇಂದ್ರದಲ್ಲಿ 4 ವರ್ಷದ ಬಾಲಕ ಸಾವನ್ನಪ್ಪಿರುವುದು ಸರ್ಕಾರದ ಅಧೋಗತಿಯನ್ನು ಸೂಚಿಸುತ್ತಿದೆಯೆಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ದೇಶದ ಆರ್ಥಿಕ ಸ್ಥಿತಿಗತಿಗಳು ಕೊಚ್ಚಿ ಹೋಗುತ್ತಿದ್ದರೂ ರಾಜಕಾರಣಿಗಳು ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದಾರೆಂದು ಪರೋಕ್ಷವಾಗಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂತ್ರಸ್ತರ ರಕ್ಷಣೆಗೆ ಬಾರದ ಸರ್ಕಾರಗಳ ಸ್ಥಿತಿ ದಯನೀಯ.. ತಾಹೀರ್ ಹುಸೇನ್ ವ್ಯಂಗ್ಯ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರೂ ಈವರೆಗೂ ಪರಿಹಾರ ಸಿಗದೆ ಸಂತ್ರಸ್ತರು ಕಂಗಲಾಗಿದ್ದಾರೆ. ವಿವಿಧ ರೀತಿಯ 14 ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡುವುದಕ್ಕೆ ಆಯಾ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದ್ದು, ಅಧಿಕಾರಿಗಳನ್ನು ನೆಮ್ಮದಿಯಿಂದ ಕೆಲಸ ಮಾಡಲು ಬಿಡುತ್ತಿಲ್ಲವೆಂದು ಆರೋಪಿಸಿದರು.
ಸಮಾಜದ ವಿವಿಧ ವರ್ಗಗಳ ನಡುವೆ ಬೇದಭಾವ ಉಂಟು ಮಾಡುವ ಹೇಳಿಕೆಗಳನ್ನು ನೀಡುತ್ತಿರುವ ಈಶ್ವರಪ್ಪ, ಬಿಜೆಪಿಗೆ ಮತ ಹಾಕದಿರುವ ಮುಸ್ಲಿಮರು ಪಾಕಿಸ್ತಾನದ ಸಮರ್ಥಕರೆಂದು ಹೇಳುವುದರ ಮೂಲಕ ಬೇಜವ್ದಾರಿತನವನ್ನು ಮೆರೆದಿದ್ದಾರೆ. ಒಂದು ಸಮುದಾಯದ ಕುರಿತು ಮಾತನಾಡುವಾಗ ನಾಲಿಗೆ ಸಡಿಲು ಮಾಡದೆ ಬಿಗಿ ಹಿಡಿದು ಮಾತನಾಡುವಂತೆ ಸಲಹೆ ನೀಡಿದರು. ಇನ್ನು, ನಾಗರಿಕರ ನಡುವೆ ತಾರತಮ್ಮ ಮಾಡುವುದಿಲ್ಲವೆಂದು ದೇವರ ಹೆಸರಲ್ಲಿ ಪ್ರಮಾಣಗೈದು ಸಚಿವರಾಗಿರುವ ಈಶ್ವರಪ್ಪ ದೇಶದ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಹಾಗಾಗಿ ಅವರು ದೇಶದ ಮುಂದೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
50 ವರ್ಷಗಳವರೆಗೆ ದೇಶದಲ್ಲಿ ಆಡಳಿತ ನಡೆಸುತ್ತೇವೆ ಎಂದು ಹೇಳುವ ಅಮಿತ ಶಾ ಈಗ ದೇಶದ ವಿರೋಧ ಪಕ್ಷದವರನ್ನು ಪದವಿ, ಹಣ ಹಾಗೂ ಬೆದರಿಕೆಗಳ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಲುಗಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್ ಕತೀಬ್, ಮುಖಂಡರಾದ ಯೂನೂಸ್ ರುಕ್ನುದ್ದೀನ್, ಅಬ್ದುಲ್ ಜಬ್ಬಾರ್ ಅಸದಿ ಹಾಗೂ ನಾಸಿರ್ ಸೇರಿ ಮುಂತಾದವರು ಉಪಸ್ಥಿತರಿದ್ದರು.