ಭಟ್ಕಳ (ಉತ್ತರ ಕನ್ನಡ): ಸೋಮವಾರದಂದು ಅಂಕೋಲಾದ ಹೊಸಕಂಬಿ ಮಾರ್ಗವಾಗಿ ಗೋಕರ್ಣಕ್ಕೆ ಬರುತ್ತಿದ್ದ ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ ಅವರ ಕಾರು ರಸ್ತೆ ಅಪಘಾತಕ್ಕೀಡಾದ ವೇಳೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಭಟ್ಕಳದ ನಾಲ್ವರು ಯುವಕರು ತಮ್ಮ ಕಣ್ಣಮುಂದೆ ಕಾರು ಪಲ್ಟಿಯಾಗಿ ಬೀಳುತ್ತಿದ್ದಂತೆಯೇ ತಕ್ಷಣಕ್ಕೆ ಓಡಿ ಹೋಗಿ ಸಚಿವರ ಜೀವ ರಕ್ಷಿಸುವಲ್ಲಿ ಸಾಹಸದ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.
ಯಲ್ಲಾಪುರಕ್ಕೆ ತೆರಳಿದ್ದ ನಾಗರಾಜ, ಗಣೇಶ, ರಜತ್ ಹಾಗೂ ಮಣಿಕಂಠ ಎಂಬ ಯುವಕರು ಭಟ್ಕಳ ಮೂಲದವರಾಗಿದ್ದಾರೆ. ಅವರು ಯಲ್ಲಾಪುರದಿಂದ ಮರಳುತ್ತಿದ್ದಾಗ ಸಚಿವರ ಕಾರು ಪಲ್ಟಿಯಾಗಿದೆ. ತಕ್ಷಣವೇ ಈ ಯುವಕರು ತಮ್ಮ ಕಾರು ನಿಲ್ಲಿಸಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಮೊದಲಿಗೆ ಕಾರಿನ ಡೋರ್ ಒಡೆದು ಒಳಗಿದ್ದ ಸಚಿವರನ್ನು ತಮ್ಮ ಕಾರಿನಲ್ಲಿ ಅಂಕೋಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಅವರ ಪತ್ನಿಯನ್ನೂ ಕಾರಿನಿಂದ ಹೊರತೆಗೆದು ಬೆಂಗಾವಲು ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಪಘಾತದ ಬಗ್ಗೆ ಯುವಕರು ಹೇಳಿದ್ದು ಹೀಗೆ
ಯಲ್ಲಾಪುರದಿಂದ ವಾಪಸಾಗುತ್ತಿದ್ದಾಗ ಯುವಕರ ಕಾರನ್ನು ಇನ್ನೊಂದು ಕಾರು ಓವರ್ ಟೇಕ್ ಮಾಡಿದೆ. ಇದಾಗ ಕೆಲವೇ ಸೆಕೆಂಡ್ಗಳಲ್ಲಿ ಕಾರು ಮುಂದಿನ ಗುಂಡಿಗೆ ಬಿದ್ದಿದೆ. ಈ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಒಂದು ಕಡೆ ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಹಾಗೆಯೇ ಬಿಡಲಾಗಿದೆ. ಇದರಿಂದ ರಸ್ತೆ ಸಮತಟ್ಟಾಗಿರದೆ ಏರಿಳಿತದಿಂದ ಕೂಡಿದೆ. ಇದರಿಂದ ವೇಗವಾಗಿದ್ದ ಸಚಿವರ ಕಾರಿನ ಹಿಂಬದಿ ಚಕ್ರ ರಸ್ತೆಯ ಗುಂಡಿಗೆ ಇಳಿದಿದೆ. ಇದರಿಂದ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದು ಗುಂಡಿಗೆ ಹೋಗಿ ಬಿದ್ದಿದೆ ಎಂದು ಯುವಕರು ವಿವರಿಸಿದ್ದಾರೆ.