ಕಾರವಾರ: ಮಳೆಗಾಲದಲ್ಲಿ ಮಕ್ಕಳು ಜೀವದ ಹಂಗು ತೊರೆದು ಓಡಾಡುವುದನ್ನು ಕಂಡು ಮಿಡಿದ ರಾಜ್ಯಸಭಾ ಸದಸ್ಯರೊಬ್ಬರ ಹೃದಯ, ಕೊನೆಗೂ ತಮ್ಮ ವ್ಯಾಪ್ತಿಯನ್ನು ಮೀರಿ ಮಕ್ಕಳಿಗೆ ಕಾಲು ಸಂಕ ನಿರ್ಮಿಸಿಕೊಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾವಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸರಿಮನೆಯಲ್ಲಿ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಈ ಭಾಗದ ಜನರು ಕಳೆದ ಹಲವು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಆದರೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
ಮಕ್ಕಳಿಗೆ ಕಾಲು ಸಂಕ ನಿರ್ಮಿಸಿಕೊಡುವ ಮೂಲಕ ಮಾದರಿ ಕಾರ್ಯ ಕಳೆದ ವರ್ಷ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಮಕ್ಕಳು ಜೀವದ ಹಂಗು ತೊರೆದು ಮರದ ಸಂಕ ದಾಟುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನು ಗಮನಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಸಹಾಯಕ್ಕೆ ಮನವಿ ಮಾಡಿದ್ದರು.
ಅದರಂತೆ ಜಿ.ಸಿ.ಚಂದ್ರಶೇಖರ್ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಮಂಜೂರು ಮಾಡಿ, ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಕಾರ್ಯದಿಂದ ಇಲ್ಲಿ ಕಾಲು ಸಂಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
ಈ ಬಗ್ಗೆ ಸ್ವತಃ ಚಂದ್ರಶೇಖರ್ ಅವರು ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಮಕ್ಕಳ ಪರಿಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಶಾಶ್ವತ ಕಾಲು ಸೇತುವೆ ನಿರ್ಮಾಣಕ್ಕಾಗಿ ಅಂದು ಪಣ ತೊಟ್ಟಿದ್ದ ಕಾರ್ಯ ಇಂದು ಪೂರ್ಣಗೊಂಡಿದೆ' ಎಂದು ಬರೆದುಕೊಂಡಿದ್ದಾರೆ.