ಶಿರಸಿ : ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಳಗಿ ವಲಯದ ವಿಂಚೊಳ್ಳಿಯಲ್ಲಿ ಹೆಣ್ಣು ಆನೆಯೊಂದು ಗಂಡು ಕಾಡಾನೆಗಳ ದಾಳಿಯಿಂದ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆಯವರು ಯಾರಿಗೂ ತಿಳಿಯಬಾರದು ಎಂದು ಗುಪ್ತವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 20 ರಿಂದ 25 ವರ್ಷದ ಹೆಣ್ಣು ಆನೆಯ ಮೇಲೆ ದಾಳಿಯಾಗಿದ್ದು, ಬುಧವಾರ ಮೃತಪಟ್ಟಿದೆ. ತಕ್ಷಣವೇ ಇಲಾಖೆಯವರು ಮರಣೋತ್ತರ ಪರೀಕ್ಷೆ ನಡೆಸಿ ಗುಪ್ತವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ.
ಆನೆಯ ಹೊಟ್ಟೆ ಸಂಪೂರ್ಣವಾಗಿ ಹರಿದು ಹೋಗಿದ್ದು, ಕರಳು ಸಮೇತ ಮಾಂಸ ಹೊರ ಬಂದಿದೆ. ಬೇಟೆಗಾರರ ದಾಳಿ ಇದಾಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆದಿದ್ದು, ಸ್ಥಳೀಯ ಗ್ರಾಮಸ್ಥರು ಹೂವು ಹಣ್ಣುಗಳಿಂದ ಪೂಜೆ ನಡೆಸಿದ್ದಾರೆ. ಕಳೆದ ತಿಂಗಳು ದಾಂಡೇಲಿ ವಲಯದಲ್ಲಿಯೇ ಮೊಸಳೆ ದಾಳಿಯಿಂದ ಆನೆ ಮೃತಪಟ್ಟಿದ್ದು , ಪ್ರಾಣಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರ ಬಗ್ಗೆ ಪ್ರಾಣಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.