ಕಾರವಾರ: ಮಹಾಮಾರಿ ಕೊರೊನಾ ವೈರಸ್ ಮನುಷ್ಯರು ಮಾತ್ರವಲ್ಲದೇ ದೇವರಿಗೂ ಸಂಕಷ್ಟ ತಂದೊಡ್ಡಿದೆ. ಪ್ರತಿನಿತ್ಯ ಜನಸಂದಣಿಯಿಂದಲೇ ಕೂಡಿರುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಭಕ್ತರು ಹಾಕುವ ಕಾಣಿಕೆ ಹಾಗೂ ದೇವಾಲಯಗಳ ಒಡೆತನದಲ್ಲಿರುವ ವ್ಯಾಪಾರಿ ಮಳಿಗೆಗಳು ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆದಾಯದ ಮೂಲವಾಗಿದ್ದವು. ಆದರೆ ಕೊರೊನಾ ಲಾಕ್ಡೌನ್ನಿಂದಾಗಿ 7 ತಿಂಗಳುಗಳ ಕಾಲ ಬಹುತೇಕ ದೇವಾಲಯ ಹಾಗೂ ಮಳಿಗೆಗಳು ಬಂದಾಗಿವೆ. ಇದರಿಂದ ಕಾಣಿಕೆಯೂ ಇಲ್ಲದೆ, ಮಳಿಗೆಗಳಲ್ಲಿ ವ್ಯಾಪಾರವೂ ಇಲ್ಲದೆ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ.
ಜಿಲ್ಲೆಗೆ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿದ್ದರು. ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯ, ಇಡಗುಂಜಿಯ ಮಹಾಗಣಪತಿ ದೇವಾಲಯ, ಶಿರಸಿಯ ಮಾರಿಕಾಂಬಾ ದೇವಾಲಯ, ಮುರುಡೇಶ್ವರ ದೇವಾಲಯ ಸೇರಿದಂತೆ ಇನ್ನಿತರ ಪ್ರಮುಖ ದೇವಾಲಯಗಳಿಗೆ ಭಕ್ತ ಸಾಗರವೇ ಹರಿದು ಬರುತಿತ್ತು. ಹೀಗೆ ಬಂದವರು ದೇವರ ಹುಂಡಿಗೆ ಹಣಹಾಕುವ ಜೊತೆಗೆ ಸುತ್ತಮುತ್ತಲಿನ ಆವರಣದಲ್ಲಿನ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿ ಮಾಡುವುದರಿಂದ ದೇವಾಲಯಗಳಿಗೆ ದೊಡ್ಡ ಮಟ್ಟದ ಆದಾಯ ಹರಿದು ಬರುತ್ತಿತ್ತು. ಅಲ್ಲದೆ ಇದು ದೇವಾಲಯದ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೂ ಸಹಕಾರಿಯಾಗಿತ್ತು. ಆದರೆ ಮಹಾಮಾರಿ ಕೊರೊನಾ ಎಲ್ಲವನ್ನೂ ನುಂಗಿಹಾಕಿದೆ.