ಶಿರಸಿ:ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆಯಾಗುತ್ತಿರುವ ಪರಿಣಾಮ ಅರೆ ಮಲೆನಾಡು ಮುಂಡಗೋಡಿ ಚಿಗಳ್ಳಿಯಲ್ಲಿರುವ ಚೆಕ್ ಡ್ಯಾಂ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಕೃಷಿ ಭೂಮಿಗೆ ಹಾನಿಯಾಗಿದೆ.
ಹಳ್ಳ-ಕೊಳ್ಳದ ನೀರು ಶೇಖರಿಸುವ ಸಲುವಾಗಿ ಚೆಕ್ ಡ್ಯಾಂ ನಿರ್ಮಾಣ ಆಗಿದ್ದು, 20 ಮೀಟರ್ ಎತ್ತರ, 830 ಮೀಟರ್ ಅಗಲ, 165 ಹೆಕ್ಟೇರ್ ವಿಸ್ತಾರ ಹೊಂದಿದೆ. 25 ಸ್ಕ್ವೇರ್ ಮೀಟರ್ ಕ್ಯಾಚ್ಮೆಂಟ್ ಏರಿಯಾ ಹೊಂದಿದ್ದು, 6800 ಕ್ಯೂಸೆಕ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದು ಒಡೆದ ಪರಿಣಾಮವಾಗಿ ಈಗಾಗಲೇ 500 ಎಕರೆಗೂ ಅಧಿಕ ಕೃಷಿ ಪ್ರದೇಶಕ್ಕೆ ನೀರು ನುಗ್ಗಿದ್ದು, ಒಟ್ಟು 5 ಸಾವಿರ ಎಕರೆ ಕೃಷಿ ಭೂಮಿಗೆ ಹಾನಿಯಾಗುವ ಆತಂಕ ಎದುರಾಗಿದೆ.
ಮುಂಡಗೋಡಿಯ ಚಿಗಳ್ಳಿ ಚೆಕ್ ಡ್ಯಾಂ ಒಡೆದು ಅಪಾರ ಹಾನಿ ಮುಂಡಗೋಡಿನ ಮುಗಸಾಲಿ, ಚುಗಳದಳಿ, ಗಣೇಶಪುರ, ಕಾತೂರ, ಹನುಮಾಪುರ, ನಾಗನೂರು ಸೇರಿದಂತೆ 6ಕ್ಕೂ ಅಧಿಕ ಗ್ರಾಮಗಳು ಡ್ಯಾಂ ನೀರನ್ನು ನಂಬಿಕೊಂಡು ಬದುಕುತ್ತಿದ್ದು, 5 ಸಾವಿರ ಎಕರೆ ಕೃಷಿ ಭೂಮಿಗೆ ಈ ನೀರೇ ಆಧಾರ. ಅಲ್ಲದೇ 10 ವರ್ಷಗಳ ನಂತರ ಡ್ಯಾಂ ಭರ್ತಿಯಾಗಿದ್ದು, ಈ ಬಾರಿಯೇ ಡ್ಯಾಂ ಒಡೆದು ನೀರು ಖಾಲಿಯಾಗಿದೆ ಎಂದು ಸ್ಥಳೀಯರು ವಿವರಿಸಿದ್ದಾರೆ.
ಮುಂಡಗೋಡ ಭಾಗಕ್ಕೆ ಚಿಗಳ್ಳಿ ಡ್ಯಾಂ ಜೀವನಾಧಾರವಾಗಿತ್ತು. ಇದು ಒಡೆದ ಪರಿಣಾಮ ರೈತರಿಗೆ ಸಮಸ್ಯೆಯಾಗಿದೆ. ನೀರು ಇಳಿದ ನಂತರ ಹಾನಿಯ ಕುರಿತು ಸಮಗ್ರ ಮಾಹಿತಿ ಪಡೆದು ಪರಿಹಾರ ನೀಡುವ ಕಾರ್ಯ ಮಾಡಲಾಗುತ್ತದೆ ಎಂದು ಸ್ಥಳ ಪರಿಶೀಲನೆ ನಡೆಸಿದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.