ಭಟ್ಕಳ: ತಾಲೂಕಿನ ಮಲ್ಲಿಗೆ ಬೆಳೆಗಾರರಿಗೆ ಪರಿಹಾರ ದೊರಕಿಸಿ ಕೊಡುವಂತೆ ಮಲ್ಲಿಗೆ ವ್ಯಾಪಾರಸ್ಥರು ಮತ್ತು ಬೆಳೆಗಾರರ ಸಂಘವು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸಂಧ್ಯಾ ಭಟ್ ಮನವಿ ಸಲ್ಲಿಸಿದರು.
ತೋಟಗಾರಿಕೆ ಇಲಾಖೆಗೆ ಬೆಳೆಗಾರರಿಂದ ಮನವಿ ತಾಲೂಕಿನಾದ್ಯಂತ 11,000ರಿಂದ 12,000 ಕುಟುಂಬಗಳು ಅಂದಾಜು 90 ಹೆಕ್ಟೇರ್ ಪ್ರದೇಶದಲ್ಲಿ ಮಲ್ಲಿಗೆ ಕೃಷಿಯನ್ನು ಪ್ರಮುಖ ಜೀವನಾಧಾರ ಬೆಳೆಯಾಗಿ ಅವಲಂಬಿಸಿವೆ. ಕೊರೊನಾ ಸೋಂಕಿನಿಂದ ಮಲ್ಲಿಗೆ ಹೂವಿಗೆ ಬೇಡಿಕೆ ಕುಸಿದಿದ್ದು, ಹೂ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸರ್ಕಾರದಿಂದ ಕೂಡಲೇ ಸಹಾಯ ನೀಡಬೇಕೆಂದು ಮನವಿ ಮಾಡಿದರು.
ಹೂವುಗಳನ್ನು ಕೀಳದೇ ಬಿಟ್ಟಿರುವುದರಿಂದ ಕೀಟಬಾಧೆ ಉಂಟಾಗುತ್ತಿದ್ದು, ಮಲ್ಲಿಗೆ ತೋಟವೇ ಹಾಳಾಗುವ ಪರಿಸ್ಥಿತಿ ಎದುರಾಗಿದೆ. ಭಟ್ಕಳದಿಂದ ಪ್ರತಿನಿತ್ಯ ಸುಮಾರು ಒಂದು ಲಕ್ಷಕ್ಕೂ ಅಧಿಕ ಹೂ ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ಸರಬರಾಜು ಆಗುತ್ತಿತ್ತು. ಅಷ್ಟೇ ಅಲ್ಲದೇ ವಿದೇಶಗಳಿಗೆ ಮಾರಾಟವಾಗುತ್ತಿತ್ತು. ಇದರಿಂದ ಅಂದಾಜು 25ರಿಂದ 30 ಲಕ್ಷ ರೂ. ವಹಿವಾಟು ನಡೆಯುತ್ತಿತ್ತು ಎಂದರು.
ಲಾಕ್ಡೌನ್ನಿಂದಾಗಿ ದೇವಸ್ಥಾನ, ಮಠ, ಮಂದಿರಗಳು ಮತ್ತು ಮನರಂಜನಾ ಕಾರ್ಯಕ್ರಮಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಭಟ್ಕಳ ತಾಲೂಕಿನ ಹೂವಿನ ವ್ಯಾಪಾರ ಕಮರಿ ಹೋಗಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದವರು ಬೀದಿ ಬರುತ್ತಿದ್ದಾರೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ದೊರಕಿಸಬೇಕೆಂದು ವಿನಂತಿಸಿಕೊಂಡರು.