ಕಾರವಾರ(ಉತ್ತರ ಕನ್ನಡ):ಬೈಕ್ ಏರಿ ಉತ್ತರಭಾರತ ಸುತ್ತುವ ಕನಸಿನೊಂದಿಗೆ ಕಾರವಾರದಿಂದ ತೆರಳಿದ್ದ ಸಾಹಸಿ ಯುವಕರ ತಂಡವೊಂದು ಹಿಮಾಚಲ ಪ್ರದೇಶದ ಬಳಿ ಸಂಭವಿಸಿದ ಪ್ರವಾಹದಿಂದ ಕೂದಲೆಳೆ ಅಂತರದಿಂದ ಪಾರಾಗಿದೆ. ಪ್ರಯಾಣದುದ್ದಕ್ಕೂ ಹಲವು ಅಡೆತಡೆಗಳನ್ನು ಎದುರಿಸಿ ಇದೀಗ ಸುರಕ್ಷಿತವಾಗಿ ಮರಳಿರುವ ಯುವಕರ ತಂಡ ತಮಗಾದ ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ. ಈ ಕುರಿತು ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಬೈಕ್ ಕ್ರೇಜ್ ಇರುವ ಬಹುತೇಕರಿಗೆ ದೂರದ ಊರುಗಳಿಗೆ ಪ್ರವಾಸ ಕೈಗೊಳ್ಳುವ ಹಂಬಲ ಕೂಡ ಇರುತ್ತದೆ. ಅದರಲ್ಲಿಯೂ ಲಡಾಕ್ ನಂತಹ ಸಾಹಸಿ ಪ್ರದೇಶಗಳಿಗೆ ತೆರಳಲು ಅದೆಷ್ಟೋ ಜನ ಎದುರು ನೋಡುತ್ತಿರುತ್ತಾರೆ. ಇಂತಹದೇ ಕನಸಿನೊಂದಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಉತ್ತರಭಾರತದ ಪ್ರವಾಸ ಕೈಗೊಂಡಿದ್ದ ಐವರು ಯುವಕರು ಹಿಮಾಚಲ ಪ್ರದೇಶದಲ್ಲಿ ಎದುರಾದ ಪ್ರವಾಹದಿಂದ ಅದೃಷ್ಟವಶಾತ್ ಪಾರಾಗಿ ತವರಿಗೆ ಮರಳಿದ್ದಾರೆ.
ಕಾರವಾರದ ಪ್ರಕಾಶ ನಾಯ್ಕ, ದರ್ಶನ ಭುಜಲೆ, ವೃಷಭ ಕಾಮತ್, ಅಲಿಸಾಬ್ ಕುಕ್ಕಳ್ಳಿ ಹಾಗೂ ಕುಮಟಾದ ಅಲ್ಮಾಬ್ರೂಕ್ ಗಣಿ ಸೇರಿ ಒಟ್ಟು ಐದು ಜನ ಮೂರು ರಾಯಲ್ ಎನ್ಫೀಲ್ಡ್ನಲ್ಲಿ ಜೂನ್ 7 ರಂದು ಉತ್ತರಭಾರತದ ಕಡೆ ಪ್ರಯಾಣ ಬೆಳಸಿದ್ದರು. ಆದರೆ ಇದೇ ಸಮಯಕ್ಕೆ ಉತ್ತರ ಭಾರತದಲ್ಲಿ ಭಾರಿ ಮಳೆಗೆ ಪ್ರವಾಹ ಸೃಷ್ಟಿಯಾಗಿತ್ತು. ಹಿಮಾಚಲ ಪ್ರದೇಶದ ಕುಲು ಸಮೀಪ ಕಸೋಲ್ ಎಂಬಲ್ಲಿ ರಾತ್ರಿ ತಂಗಿದ್ದ ಐವರು ಬೆಳಗ್ಗೆ ಬೇಗನೆ ಎದ್ದು ಮಳೆಯಲ್ಲಿ ಮುಂದಿನ ಪ್ರಯಾಣ ಬೆಳೆಸಿದ್ದರು.
ಆದರೆ ಬಳಿಕ ಬಂದ ಸುದ್ದಿ ನೋಡಿ ತಂಡದ ಸದಸ್ಯರ ಎದೆ ಝಲ್ ಎನ್ನುವಂತಾಗಿತ್ತು. ಕಸೋಲ್ ಎಂಬಲ್ಲಿ ತಾವು ಉಳಿದುಕೊಂಡಿದ್ದ ಹೊಟೆಲ್ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಅಲ್ಲದೆ ಶ್ರೀನಗರ ಸಮೀಪವೂ ನಾವು ಸೇತುವೆಯೊಂದನ್ನು ದಾಟಿದ ಕೆಲ ಹೊತ್ತಿನ ಬಳಿಕ ಸೇತುವೆ ಪ್ರವಾಹದಿಂದ ಉಕ್ಕಿ ಹರಿಯತೊಡಗಿತ್ತು. ಆದರೆ ನಮ್ಮ ಕುಟುಂಬಸ್ಥರ ಪ್ರಾರ್ಥನೆಯಿಂದಲೋ ಏನೋ ಅದೃಷ್ಟವಶಾತ್ ಯಾವುದೇ ತೊಂದರೆ ಇಲ್ಲದೆ ವಾಪಸಾಗಿದ್ದೇವೆ ಎನ್ನುತ್ತಾರೆ ಪ್ರವಾಸಿ ತಂಡದವರು.