ಭಟ್ಕಳ: ಕೇಂದ್ರ ಗೃಹ ಸಚಿವಾಲಯವು ಯುಎಪಿ ಆ್ಯಕ್ಟ್ ಅಡಿ 18 ಮಂದಿಯನ್ನು ಉಗ್ರರು ಎಂದು ಗುರುತಿಸಿದ್ದು, ಅದರಲ್ಲಿ ಭಟ್ಕಳ ಮೂಲದ ಇಬ್ಬರು ಸಹೋದರರ ಹೆಸರು ಸೇರ್ಪಡೆಯಾಗಿದೆ.
ಭಟ್ಕಳ ಸಹೋದರರು, ಛೋಟಾ ಶಕೀಲ್ ಸೇರಿ 18 ಮಂದಿಗೆ 'ಉಗ್ರ' ಪಟ್ಟ - Bhatkal's Latest Crime News
ಕಳೆದ ವರ್ಷ ಸಂಸತ್ ಅನುಮೋದನೆ ಪಡೆದ ಭಯೋತ್ಪಾದನಾ ವಿರೋಧಿ ಕಾಯ್ದೆಯ ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯವು 18 ಮಂದಿಯನ್ನು ಉಗ್ರರ ಪಟ್ಟಿಗೆ ಸೇರಿಸಿದೆ..
![ಭಟ್ಕಳ ಸಹೋದರರು, ಛೋಟಾ ಶಕೀಲ್ ಸೇರಿ 18 ಮಂದಿಗೆ 'ಉಗ್ರ' ಪಟ್ಟ 'terrorists' tag to 18 members including Bhatkal brothers and Chhota Shakeel](https://etvbharatimages.akamaized.net/etvbharat/prod-images/768-512-9339236-964-9339236-1603867660564.jpg)
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) 1967ಕ್ಕೆ ಕಳೆದ ವರ್ಷದ ಆಗಸ್ಟ್‌ನಲ್ಲಿ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ ವ್ಯಕ್ತಿಗಳನ್ನು ಗುರುತಿಸಿ ಉಗ್ರರು ಎಂದು ಹೆಸರಿಸಲು ಅವಕಾಶ ನೀಡಿತ್ತು. ಈ ಹಿಂದೆ 13 ಉಗ್ರರನ್ನು ಗುರುತಿಸಲಾಗಿತ್ತು. ಇದೀಗ ಭಯೋತ್ಪಾದನಾ ವಿರೋಧಿ ಕಾಯ್ದೆಯ ಅಡಿಯಲ್ಲಿ 18 ಮಂದಿಯನ್ನು ಭಯೋತ್ಪಾದಕರು ಎಂದು ಹೆಸರಿಸಲಾಗಿದೆ. ಈ ಪೈಕಿ ಭಟ್ಕಳ ಮೂಲದ ಇಂಡಿಯನ್ ಮುಜಾಹಿದ್ದೀನ್ ಸ್ಥಾಪಕರಾದ ರಿಯಾಜ್ ಭಟ್ಕಳ ಮತ್ತು ಇಕ್ಬಾಲ್ ಭಟ್ಕಳ, ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸಯ್ಯದ್ ಸಲಾಹುದ್ದೀನ್, ಹಾಗೂ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂನ ಆಪ್ತ ಛೋಟಾ ಶಕೀಲ್ ಸೇರಿದ್ದಾರೆ.
ಘೋಷಿಸಿದ ವ್ಯಕ್ತಿಗಳು ಪಾಕಿಸ್ತಾನದಲ್ಲಿ ಅಡಗಿದ್ದಾರೆ. ಈ ವ್ಯಕ್ತಿಗಳು ಗಡಿ ಭಾಗದೊಳಗೆ ಅನೇಕ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ದೇಶವನ್ನು ಅಸ್ಥಿರಗೊಳಿಸಲು ಅನೇಕ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಿದ್ದರು. ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆಯೆಡೆಗಿನ ಶೂನ್ಯ ಸಹಿಷ್ಣುತೆಯನ್ನು ಬಲಪಡಿಸುವ ಬದ್ಧತೆಗಾಗಿ 18 ಮಂದಿಯನ್ನು ಉಗ್ರರು ಎಂದು ಘೋಷಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳಿಕೆ ತಿಳಿಸಿದೆ.