ಕಾರವಾರ: ಕಡಲನಗರಿ ಕಾರವಾರದಲ್ಲಿ ವಾಣಿಜ್ಯ ಬಂದರು ವಿಸ್ತರಣೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಕಾಮಗಾರಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ.
ಕಳೆದ 12 ದಿನಗಳಿಂದ ಕೆಲಸ ಬಿಟ್ಟು ಪ್ರತಿಭಟನೆ ನಡೆಸುತ್ತಿರುವ ಮೀನುಗಾರರು ಕಡಲತೀರದ ಯಥಾಸ್ಥಿತಿಗೆ ಆಗ್ರಹಿಸಿದ್ದು, ನಾಳೆ ಬೃಹತ್ ಮೆರವಣಿಗೆ ಮೂಲಕ ಯೋಜನೆ ವಿರೋಧ ವ್ಯಕ್ತಪಡಿಸಿ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡಲು ಮುಂದಾಗಿದ್ದಾರೆ.
ಹೈಕೋರ್ಟ್ ಮಧ್ಯಂತರ ತಡೆ ಕುರಿತು ಮಾಜಿ ಶಾಸಕರ ಸುದ್ದಿಗೋಷ್ಠಿ ವಾಣಿಜ್ಯ ಬಂದರು ವಿಸ್ತರಣೆಯಿಂದಾಗಿ ಮೀನುಗಾರಿಕೆಗೆ ತೊಂದರೆಯಾಗುವ ಜೊತೆಗೆ ಟ್ಯಾಗೋರ ಕಡಲತೀರಕ್ಕೆ ಹಾನಿಯಾಗುವ ಆತಂಕ ಎದುರಾಗಿತ್ತು. ಇದರಿಂದ ಮೀನುಗಾರರು ಕಳೆದ 12 ದಿನಗಳಿಂದ ಮೀನುಗಾರಿಕೆ ಹಾಗೂ ಮೀನುಮಾರಾಟ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೊರಾತ್ರಿ ಪ್ರತಿಭಟನೆಗೆ ಇಳಿದಿದ್ದರು. ಅಲ್ಲದೆ ಈ ಸಂಬಂಧ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ನಡೆಸಿದ ಪರಿಣಾಮ ಗುರುವಾರ ವಿಚಾರಣೆ ನಡೆಸಿದ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದ್ದು, ಮೀನುಗಾರರಿಗೆ ಮೊದಲ ಜಯ ಲಭಿಸಿದೆ.
ಇನ್ನು ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮೀನುಗಾರಿಕಾ ಸಚಿವರ ಸಮ್ಮುಖದಲ್ಲಿ ಚರ್ಚಿಸಲು ಜನವರಿ 31ರಂದು ಬೆಂಗಳೂರಿನಲ್ಲಿ ಸಭೆ ಕರೆದಿದೆ. ಆದರೆ ಇದೀಗ ಕಾಮಗಾರಿಗೆ ಹೈಕೋರ್ಟ್ ತಡೆ ನೀಡಿದ್ದು ಸಭೆ ನಡೆಯುತ್ತದೆಯೋ ಇಲ್ಲವೋ ಎಂಬುದು ಇನ್ನು ಸ್ಪಷ್ಟಗೊಂಡಿಲ್ಲ.