ಶಿರಸಿ (ಉತ್ತರ ಕನ್ನಡ): ಕನ್ನಡದ ಮೊದಲ ರಾಜಧಾನಿ, ಆದಿಕವಿ ಪಂಪನ ನೆಲ, ಕದಂಬರ ಆರಾಧ್ಯ ದೈವ ಮಧುಕೇಶ್ವರ ನೆಲೆನಿಂತ ಇತಿಹಾಸ ಪ್ರಸಿದ್ಧ ಕ್ಷೇತ್ರ ಬನವಾಸಿ. ನಿತ್ಯ ಸಾವಿರಾರು ಪ್ರವಾಸಿಗರ ಮನಸೂರೆಗೊಳ್ಳುವ ಬನವಾಸಿಯ ಜೇನು ಬಣ್ಣದ ಶಿವಲಿಂಗವಾಗಿ ನೆಲೆನಿಂತ ಮಧುಕೇಶ್ವರನಿಗೆ ಉಳಿದ ಕಾಲದಲ್ಲಿ ಅರ್ಚಕರಿಂದ ಜಲಾಭಿಷೇಕ ನಡೆಯುತ್ತದೆ. ಆದರೆ ಪುರಾತತ್ವ ಇಲಾಖೆಯಿಂದ ಮಳೆಗಾಲದಲ್ಲಿ ವರುಣ ದೇವನಿಂದಲೇ ಜಲಾಭಿಷೇಕ ನಡೆಯುವ ಸ್ಥಿತಿ ಬಂದಿತ್ತು. ಈಗ ಅದನ್ನು ಸರಿಪಡಿಸಲು ಹೋಗಿ ಮಧುಕೇಶ್ವರನಿಗೆ ಟಾರ್ಪಲ್ ಹೊದಿಸುವ ಮೂಲಕ ಕನ್ನಡಿಗರ ಅಸ್ಮಿತೆಗೆ ಪ್ರಾಚ್ಯವಸ್ತು ಇಲಾಖೆ ಧಕ್ಕೆ ತಂದಿದೆ.
ಸಾಮಾನ್ಯವಾಗಿ ದೇವಾಲಯಗಳೆಂದರೆ ಭಕ್ತರಿಗೆ ಶಾಂತಿ, ಮನಸ್ಸಿಗೆ ಮುದ ನೀಡುವ ತಾಣ. ದೇವಾಲಯಗಳು ಹಿಂದೂ ಧಾರ್ಮಿಕತೆಯಲ್ಲಿ ವಿಶೇಷ ಸ್ಥಾನ ಪಡೆದಿವೆ. ದೇವಾಲಯಗಳಲ್ಲಿ ಸೋರಿಕೆ ಕಂಡು ಬಂದರೆ ಕೂಡಲೇ ಸಂಬಂಧಪಟ್ಟ ಆಡಳಿತ ಮಂಡಳಿ ಅಥವಾ ಮುಜರಾಯಿ ಇಲಾಖೆ ಅದರತ್ತ ಗಮನಹರಿಸಿ ಸೋರಿಕೆ ತಡೆಯುವಿಕೆಗೆ ಶಾಶ್ವತ ಪರಿಹಾರ ರೂಪಿಸುತ್ತವೆ. ಭಕ್ತರಿಗೆ ಮಳೆಗಾಲದಲ್ಲಿ ಜಲಾಭಿಷೇಕ ಆಗದಂತೆ ತಡೆಯುವ ಕೆಲಸ ಮಾಡುತ್ತವೆ. ಆದರೆ ಸುಂದರ ಶಿಲ್ಪ ಕೆತ್ತನೆಗೆ ಹೆಸರಾಗಿದ್ದ ಬನವಾಸಿಯ ಮಧುಕೇಶ್ವರ ದೇವಾಲಯ ಮಳೆಗಾಲದಲ್ಲಿ ಸೋರುವ ಕಾರಣಕ್ಕೆ ಟಾರ್ಪಲ್ ಹೊದ್ದು ತನ್ನ ಸೌಂದರ್ಯ ಮರೆಮಾಚಿದೆ. ಇದು ಪ್ರಾಚ್ಯವಸ್ತು ಇಲಾಖೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಕದಂಬರ ರಾಜಧಾನಿ ಬನವಾಸಿಯಲ್ಲಿನ ಮಧುಕೇಶ್ವರ ದೇವಾಲಯ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸೋರುತ್ತಿದೆ. ಗರ್ಭಗುಡಿ, ನಂದಿ ಮಂಟಪ ಇತರೆಡೆಗಳಲ್ಲಿ ದೇವಾಲಯದ ಮೇಲ್ಛಾವಣಿಯ ಗಾರೆ ಕಳಚಿ ನೀರು ಒಳ ಬರುತ್ತಿದೆ. ದಶಕಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ದುರಸ್ತಿ ಕಾರ್ಯವಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ದೇವಾಲಯದ ಸೌಂದರ್ಯ ಕಳೆಗುಂದುತ್ತಿದೆ ಎಂಬುದು ಆಡಳಿತ ಸಮಿತಿಯ ದೂರಾಗಿತ್ತು. ಈ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವರಿಕೆ ಮಾಡಲಾಗಿತ್ತು.
ಪ್ರಸಕ್ತ ಸಾಲಿನ ಮಳೆಗಾಲದಲ್ಲಿಯೂ ಮತ್ತೆ ಸೋರಿಕೆ ಜೋರಾಗಿದೆ. ಇದನ್ನು ವಿರೋಧಿಸಿ ಸ್ಥಳೀಯರು ಧ್ವನಿಯೆತ್ತಿದ ಪರಿಣಾಮ ಇಲಾಖೆಯ ಹಾವೇರಿ ವಿಭಾಗದ ಸಿಬ್ಬಂದಿ ಟಾರ್ಪಲಿನ್ ಹೊದಿಸಿ ತಾತ್ಕಾಲಿಕ ಪರಿಹಾರ ಕಾರ್ಯ ಮಾಡಿದ್ದಾರೆ. ಆದರೆ ಇದರಿಂದ ದೇವಾಲಯದ ಸೌಂದರ್ಯ ಮರೆಯಾಗುವಂತಾಗಿದೆ. ದೂರದ ಊರುಗಳಿಂದ ಬರುವ ಭಕ್ತರಿಗೆ ಮಧುಕೇಶ್ವರನ ಸ್ಥಿತಿ ನೋಡಿ ಮರುಕ ಬರುತ್ತಿದೆ.