ಕಾರವಾರ:ರಾಜ್ಯದಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದ ಅಬ್ಬರ ತಾರಕಕ್ಕೇರುತ್ತಿದೆ. ಇವತ್ತು ಬಿಜೆಪಿ ನಾಯಕಿ ತಾರಾ, ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡುತ್ತಾ,ಮಹಾಘಟಬಂದನ್ಗೆ ಅಧಿಕಾರ ನೀಡಿ ವಾರಕ್ಕೊಬ್ಬರು ಪ್ರಧಾನಿಯನ್ನು ನೋಡುವ ಬದಲು ಬಿಜೆಪಿಯ ಸಮರ್ಥ ನಾಯಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಆಡಳಿತಕ್ಕೆ ತರುವಂತೆ ಮತದಾರರಲ್ಲಿ ಮನವಿ ಮಾಡಿದರು.
ಕ್ಷೇತ್ರದ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಪರ ಪ್ರಚಾರ ನಡೆಸಿದ ಅವರು ನಗರದ ರಸ್ತೆಯಂಚಿನ ಅಂಗಡಿಗಳಿಗೆ ತೆರಳಿ ಕ್ಷೇತ್ರದ ಅಭ್ಯರ್ಥಿಯ ಸಾಧನೆಗಳ ಬಗ್ಗೆ ಕರಪತ್ರ ಹಂಚಿದರು. ಬಳಿಕ ಮಾತನಾಡಿದ ಅವರು, ಈ ಬಾರಿ ಚುನಾವಣೆ ಯಾವುದೇ ಜಾತಿ, ಧರ್ಮಕ್ಕಾಗಿ ನಡೆಯುತ್ತಿಲ್ಲ. ಇದು ರಾಷ್ಟ್ರಕ್ಕಾಗಿ ನಡೆಯುವ ಚುನಾವಣೆ. ನಮ್ಮ ಪಕ್ಷ ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಅವರ ಹೆಸರೇ ನಮ್ಮ ಶಕ್ತಿ. ಈ ಹಿಂದೆ ಹಿಂದುಳಿದ ದೇಶ ಎಂದು ಕರೆಸಿಕೊಳ್ಳುತ್ತಿದ್ದ ಭಾರತ, ಇಂದು ಜಗತ್ತಿನ ಬೃಹತ್ ಆರ್ಥಿಕತೆಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದು, 6 ನೇ ಸ್ಥಾನಕ್ಕೆ ಬಂದು ನಿಂತಿದೆ ಎಂದು ಹೇಳಿದರು.