ಕಾರವಾರ : ನಗರದ ಪ್ರಸಿದ್ದ ರವೀಂದ್ರನಾಥ್ ಠಾಗೋರ್ ಕಡಲ ತೀರ ಪ್ಲಾಸ್ಟಿಕ್, ಬಟ್ಟೆ, ಹೆಂಡದ ಬಾಟಲಿಗಳಿಂದ ತುಂಬಿ ತ್ಯಾಜ್ಯ ಹಾಕುವ ಡಂಪಿಂಗ್ ಯಾರ್ಡ್ ರೀತಿ ಕಾಣುತ್ತಿದ್ದು, ಕಡಲ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಲ್ಲಿ ಬೇಸರ ಮೂಡಿಸಿದೆ.
ಕಸದ ತೊಟ್ಟಿಯಂತಾದ ಟ್ಯಾಗೋರ್ ಕಡಲತೀರ ಕೆಲ ದಿನದ ಹಿಂದೆ ಕಡಲ ತೀರದಲ್ಲಿ ಉತ್ಸವ ನಡೆದ ಹಿನ್ನಲೆ ಅಂಗಡಿ ಮಳಿಗೆಗಳನ್ನು ಹಾಕಲಾಗಿತ್ತು. ಮೂರು ದಿನದ ಹಿಂದೆ ಅಂಗಡಿಗಳನ್ನು ತೆರವು ಮಾಡಲಾಗಿತ್ತು. ಆದರೆ, ಅಂಗಡಿ ತೆರವು ಮಾಡುವ ವೇಳೆ ರಾಶಿ ರಾಶಿ ಕಸವನ್ನು ಹಾಗೇ ಬಿಟ್ಟು ಹೋಗಲಾಗಿದೆ. ಹೀಗಾಗಿ, ಕಡಲ ತೀರದಲ್ಲಿ ಎಲ್ಲೆಲ್ಲೂ ಕಸದ ರಾಶಿ ಕಾಣುತ್ತಿದೆ.
ಇದನ್ನೂ ಓದಿ: ಎಂಜಿನಿಯರ್ ಎಡವಟ್ಟು: ಚರಂಡಿಯಲ್ಲಿ ಲೈಟ್ ಕಂಬ ನಿರ್ಮಾಣ
ಠಾಗೋರ್ ಕಡಲ ತೀರ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರುಗಡೆಯೇ ಇದ್ದರೂ, ಸಂಬಂಧಪಟ್ಟವರು ಸ್ವಚ್ಚಗೊಳಿಸುವ ಗೋಜಿಗೆ ಹೋಗಿಲ್ಲ. ಗಾಳಿಗೆ ಅಪಾಯಕಾರಿ ಪ್ಲಾಸ್ಟಿಕ್ ಕಡಲಿಗೆ ಸೇರುತ್ತಿದ್ದು, ಜಲಚರಗಳಿಗೆ ಇದರಿಂದ ಸಮಸ್ಯೆಯಾಗಲಿದೆ. ಕಡಲ ತೀರದಲ್ಲಿ ಕಸ ತುಂಬಿಕೊಂಡಿರುವುದಕ್ಕೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಕಡಲ ತೀರದಲ್ಲಿ ಕೇವಲ ಪ್ರವಾಸಿಗರ ಭೇಟಿಗೆ ಮಾತ್ರ ಅವಕಾಶ ನೀಡಬೇಕೆ ಹೊರತು, ಉತ್ಸವಗಳಿಗೆ ಅವಕಾಶ ಮಾಡಿಕೊಡಬಾರದು. ಒಂದೊಮ್ಮೆ ಕೊಟ್ಟರೂ ಸ್ವಚ್ಚತೆಗೆ ಆದ್ಯತೆ ಕೊಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.