ಶಿರಸಿ: ಕೊಡಗಿನಲ್ಲಿನ ಬಾಣೆ ಜಮೀನಿಗೆ ಸಂಬಂಧಿಸಿದಂತೆ ಅರ್ಜಿದಾರರ ಪರ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ರಾಜ್ಯದ ಉಳಿದೆಡೆಗಳಲ್ಲಿ ಈ ರೀತಿಯ ಜಮೀನು ಹೊಂದಿದ ರೈತರಲ್ಲಿ ಆಶಾಭಾವನೆ ಮೂಡುವಂತೆ ಮಾಡಿದೆ. ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಮಲೆನಾಡು ಭಾಗದ ರೈತರು ಸಂತಸಗೊಂಡಿದ್ದು, ಇಲ್ಲಿನ ಸೊಪ್ಪಿನ ಬೆಟ್ಟಗಳ ಮಾಲೀಕತ್ವದ ಬಗ್ಗೆ ಚರ್ಚೆ ಹುಟ್ಟು ಹಾಕಿದೆ.
ಕೊಡಗು ಜಿಲ್ಲೆಯಲ್ಲಿ ವರ್ಗಭೂಮಿ ಹೊಂದಿರೋರಿಗೆ ಸಿಗೋ ಬಾಣೆ ಜಮೀನನ್ನ ಹಂಚಿಕೊಳ್ಳೋ ಅಧಿಕಾರವನ್ನ ರೈತರಿಗೆ ನೀಡಿ, ಇದು ಸೀಮಿತ ಆಸ್ತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಕೊಡಗಿನ ಕೋಟಿಯಂಗದ ಬಿ.ಮೋಟಯ್ಯ ವರ್ಸಸ್ ಮಾಚಿಮಾಡ ಬೆಳ್ಳಿಯಪ್ಪ ಮತ್ತು ಇತರರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಇದು ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ಸಂಬಂಧಿಸಿದಂತೆ ಅತಿ ಮಹತ್ವದ ತೀರ್ಪು ಎಂದು ಸಾರ್ವಜನಿಕ ವಲಯದಲ್ಲಿ ವಿಶ್ಲೇಷಣೆಗಳು ನಡೆಯುತ್ತಿವೆ. ಈ ತೀರ್ಪು ಜಿಲ್ಲೆಯ ರೈತರಲ್ಲಿ ಕೂಡ ಆಶಾಭಾವನೆ ಮೂಡಿಸಿದೆ. ಯಾಕೆಂದರೆ, ಕೊಡಗಿನ ಬಾಣೆ ಜಮೀನಿಗೆ ಸಮಾನಾಂತರವಾಗಿ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ರೈತರಿಗೆ ಸೊಪ್ಪಿನ ಬೆಟ್ಟಗಳಿವೆ.
ಮಲೆನಾಡು ಭಾಗದ ರೈತರಲ್ಲಿ ಮೂಡಿದ ಆಶಾಭಾವನೆ ಈ ಸೊಪ್ಪಿನ ಬೆಟ್ಟಗಳು ರೈತರಿಗೆ ಒಂದು ಎಕರೆ ತೋಟಕ್ಕೆ 8 ಎಕರೆ ಬೆಟ್ಟಗಳಂತೆ ಹಂಚಲ್ಪಟ್ಟಿದ್ದವು. ಆದರೆ, ಈ ಭೂಮಿಗಳ ಅಧಿಕಾರ ಸರ್ಕಾರದ ವಶದಲ್ಲೇ ಇದೆ. ರೈತರು ಈ ಬೆಟ್ಟಗಳಿಂದ ತಮ್ಮ ಕೃಷಿ ಚಟುವಟಿಕೆಗೆ ಹಾಗೂ ಮನೆಬಳಕೆಗೆ ಬೇಕಾಗೋ ಸೊಪ್ಪು ಸಂಗ್ರಹ, ಕಟ್ಟಿಗೆ, ಮರಮಟ್ಟುಗಳನ್ನು ಮಾತ್ರ ಈ ಜಮೀನಿನಿಂದ ಪಡೆಯಬಹುದೇ ವಿನಾಃ ಅಲ್ಲಿ ಕೃಷಿ ಮಾಡೋ ಹಾಗಿಲ್ಲ ಎಂದು ಭೂ ಕಂದಾಯ ಕಾಯ್ದೆ ಹೇಳಿತ್ತು.
ಆದರೆ, ಸುಪ್ರೀಂಕೋರ್ಟ್‌ನ ಈ ತೀರ್ಪು ಇಂತಹ ಜಮೀನುಗಳ ಮೇಲೆ ರೈತರಿಗೆ ಇರೋ ಸೀಮಿತ ಅಧಿಕಾರವನ್ನು ಮಾನ್ಯ ಮಾಡಿದಂತೆ ಆಗಿದೆ. ಆದ್ದರಿಂದ ಜಿಲ್ಲೆಯ ರೈತರಲ್ಲಿ ಈ ಕುರಿತು ಆಶಾಭಾವನೆ ಮೂಡಿದೆ. ಈ ತೀರ್ಪಿನಂತೆ ರೈತರಿಗೆ ಭೂಮಿಯ ಅಧಿಕಾರ ನೀಡಿದ್ರೆ, ಇನ್ನಷ್ಟು ಅರಣ್ಯಗಳ ರಕ್ಷಣೆ ಸಾಧ್ಯ ಅಂತಾರೆ ರೈತರು.
ಆದರೆ, ಈ ತೀರ್ಪು ಕೊಡಗಿಗೆ ಮಾತ್ರ ಅನ್ವಯವಾಗುತ್ತಾ ಅಥವಾ ರಾಜ್ಯದ ಇತರೆಡೆಗೂ ಅನ್ವಯಿಸುತ್ತಾ ಅನ್ನೋದನ್ನ ವಿಶ್ಲೇಷಿಸುವ ಅಗತ್ಯವಿದೆ ಅಂತಾರೆ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರು. ಸುಪ್ರೀಂಕೋರ್ಟ್‌ನ ಈ ತೀರ್ಪು ರಾಜ್ಯದ ಉಳಿದೆಡೆ ಅನ್ವಯವಾದ್ರೆ ಇದರಿಂದ ರೈತರಿಗೆ ಇನ್ನಷ್ಟು ಅನುಕೂಲವಾಗುತ್ತೆ. ಆದ್ದರಿಂದ ಈ ತೀರ್ಪಿನ ಬಗ್ಗೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರಿಗೆ ಅನುಕೂಲವಾಗುವ ಆಶಾಭಾವನೆ ಮೂಡಿಸಿದೆ.