ಕಾರವಾರ: ಅದ್ಯಾಕೋ ಏನೋ ಉತ್ತರಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ ಒಂದಲ್ಲೊಂದು ಕಾರಣಕ್ಕೆ ಮುಂದೆ ಹೋಗುತ್ತಲೇ ಇದೆ. ಕಳೆದ ಕೆಲ ದಿನಗಳ ಹಿಂದೆ ಖುದ್ದು ಸಿಎಂ ಬೊಮ್ಮಾಯಿ ಜಿಲ್ಲೆಗೆ ಆಗಮಿಸಿ ಆಸ್ಪತ್ರೆಗೆ ಅಡಿಗಲ್ಲು ಹಾಕುತ್ತಾರೆ ಎನ್ನಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಮುಖ್ಯಮಂತ್ರಿಗಳ ಭೇಟಿ ನಿಗದಿಯಾಗದ ಹಿನ್ನಲೆ ಆಸ್ಪತ್ರೆ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಹೀಗೆ ಆಸ್ಪತ್ರೆ ನಿರ್ಮಾಣ ಪದೇ ಪದೇ ಮುಂದೆ ಹೋಗುತ್ತಿರೋದು ಇದೀಗ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಸದ್ಯ ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವಿಚಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ. ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ಒತ್ತಡಗಳು ಹೆಚ್ಚಾದ ಬೆನ್ನಲ್ಲೇ ಸರ್ಕಾರ ಜಾಗ ಗುರುತಿಸಿ ಬಜೆಟ್‌ನಲ್ಲಿ ಆಸ್ಪತ್ರೆಯನ್ನೇನೋ ಘೋಷಣೆ ಮಾಡಿದೆ. ಆದರೆ ಇದುವರೆಗೂ ಸಹ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಮುಹೂರ್ತವೇ ಕೂಡಿಬಂದಿಲ್ಲ.
ಜಿಲ್ಲೆಯ ಜನಪ್ರತಿನಿಧಿಗಳು ಖುದ್ದು ಮುಖ್ಯಮಂತ್ರಿಗಳ ಕೈಯ್ಯಿಂದಲೇ ಆಸ್ಪತ್ರೆಗೆ ಅಡಿಗಲ್ಲು ಹಾಕಲು ಯತ್ನಿಸುತ್ತಿರುವ ಪರಿಣಾಮ ಪದೇ ಪದೇ ಅಡಿಗಲ್ಲು ಕಾರ್ಯಕ್ರಮ ಮುಂದಕ್ಕೆ ಹೋಗುತ್ತಿದೆ. ಇನ್ನೊಂದೆಡೆ ಆಸ್ಪತ್ರೆಗೆ ನೀಡಿರುವ ಜಾಗದ ವಿಚಾರವೂ ಸಹ ಸಾಕಷ್ಟು ಗೊಂದಲಮಯವಾಗಿದ್ದು, ಸರ್ಕಾರಕ್ಕೆ ಆಸ್ಪತ್ರೆ ನಿರ್ಮಿಸುವ ಮನಸ್ಸಾದ್ರೂ ಇದೆಯೋ ಇಲ್ಲವೋ ಎನ್ನುವ ಅನುಮಾನ ಜನರನ್ನು ಕಾಡತೊಡಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಸ್ಪೆಷಾಲಿಟಿ ಆಸ್ಪತ್ರೆ ಎಂಬುದು ಇದೊಂದು ಧಾರವಾಹಿಯಂತಾಗಿದೆ. ಸ್ಥಳೀಯ ಶಾಸಕರು, ಸಚಿವರು ಮುಖ್ಯಮಂತ್ರಿಗಳು ಇದರ ಹೀರೋಗಳು. ಕಳೆದ ಎರಡ್ಮೂರು ವರ್ಷಗಳಿಂದ ಬಿಜೆಪಿಯವರು ಈ ಧಾರವಾಹಿ ಓಡಿಸುತ್ತಲೇ ಇದ್ದಾರೆ. ರಾಜ್ಯದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಇನ್ಯಾವಾಗ ಆಸ್ಪತ್ರೆ ಕಾಮಗಾರಿ ಆರಂಭಿಸುತ್ತೀರಿ ಎಂದು ಸ್ಥಳೀಯ ಭಾಸ್ಕರ್ ಪಟಗಾರ ಪ್ರಶ್ನಿಸಿದ್ದಾರೆ.