ಕಾರವಾರ: ಹೋಳಿ ಸಮೀಪಿಸುತ್ತಿದ್ದು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸುಗ್ಗಿ ಸಂಭ್ರಮ ಕಳೆಗಟ್ಟಿದೆ. ಜಿಲ್ಲೆಯ ವಿಶೇಷ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾಗಿರುವ ಹೋಳಿ ಸುಗ್ಗಿಯ ಮೆರುಗು ಎಲ್ಲೆಡೆಯೂ ಕಂಡು ಬರುತ್ತಿದೆ. ಬಗೆಬಗೆ ವೇಷಧಾರಿಗಳು, ಕೋಲಾಟ, ಗುಮಟೆ ಪಾಂಗಿನ ಸದ್ದಿನೊಂದಿಗೆ ಭಿನ್ನ, ವಿಭಿನ್ನ ತುರಾಯಿಗಳನ್ನು ಧರಿಸಿ ಸಮುದಾಯದ ಮನೆಗಳ ಬಳಿ ತೆರಳಿ ಕುಣಿಯುವ ಮೂಲಕ ತಮ್ಮ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.
ಜಿಲ್ಲೆಯ ಹಾಲಕ್ಕಿ, ಕೋಮಾರಪಂಥ, ಗ್ರಾಮ ಒಕ್ಕಲಿಗ, ನಾಮಧಾರಿ, ಅಂಬಿಗ, ಗುನಗಿ ಸೇರಿದಂತೆ ಅನೇಕ ಸಮಾಜದವರು ಸಾಂಪ್ರದಾಯಿಕ ಕಲೆಯಾದ ಸುಗ್ಗಿ ಕುಣಿತವನ್ನು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಾರಂಭಿಸಿದ್ದಾರೆ. ಹಬ್ಬಕ್ಕೆ ಏಳು, ಒಂಬತ್ತು ದಿನಗಳ ಮುನ್ನ ಸುಗ್ಗಿ ಕಟ್ಟುವ ತಂಡ, ಬಳಿಕ ಊರೂರು ತಿರುಗಿ ತಮ್ಮ ಸಮಾಜದವರ ಮನೆಗಳ ಮುಂದೆ ಕುಣಿದು ಪ್ರದರ್ಶನ ನಡೆಸುತ್ತಿದ್ದಾರೆ.
ಈ ಬಾರಿಯೂ ಕೂಡಾ ಕಾರವಾರ ತಾಲೂಕಿನ ಗುನಗಿ ಸಮಾಜದ ಸುಗ್ಗಿ ಕುಣಿತಕ್ಕೆ ಚಾಲನೆ ಸಿಕ್ಕಿದ್ದು, ತಮ್ಮ ಸಮುದಾಯದವರು ಇರುವಲ್ಲಿಗೆ ತೆರಳಿ ಸುಗ್ಗಿ ಕುಣಿತವನ್ನು ಪ್ರದರ್ಶಿಸುತ್ತಿದ್ದಾರೆ. ತಾಲೂಕಿನ ಚೆಂಡಿಯಾ ಗ್ರಾಮದ ಕರಿ ದೇವರಿಗೆ ಪೂಜೆ ಮಾಡಿ ಹೊರಟಿರುವ ಸುಗ್ಗಿ ಕುಣಿತದ ತಂಡದವರು, ಮನೆ ಮನೆಗೆ ತೆರಳಿ ತಮ್ಮ ಕಲೆಯನ್ನ ಅನಾವರಣ ಮಾಡುತ್ತಾರೆ.
"ಹೋಳಿ ಹುಣ್ಣಿಮೆಗೂ ಏಳು ದಿನಗಳ ಮುಂಚೆ ಸುಗ್ಗಿ ಕುಣಿತವನ್ನು ಪ್ರಾರಂಭಿಸುವುದು ಗುನಗಿ ಸಮಾಜದವರಲ್ಲಿ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ತಮ್ಮ ಜನಾಂಗದವರು ನೆಲೆಸಿರುವ ಮನೆಗಳ ಮುಂದೆ ಕುಣಿತ ಮಾಡುವುದರಿಂದ ಜನರಿಗೆ ಎದುರಾಗಿರುವ ಸಮಸ್ಯೆ, ತೊಂದರೆಗಳು ಬಗೆಹರಿಯುವುದರ ಜೊತೆಗೆ ಯಾವುದೇ ರೋಗಗಳು ಬರದಂತೆ ತಡೆಯುತ್ತದೆ ಎಂನ ನಂಬಿಕೆ ಇದೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡ ಬಂದ ಪ್ರಕ್ರಿಯೆಯಾಗಿದೆ. ಗುನಗಿ ಸಮಾಜದವರು ಕೊರೊನಾ ಸೇರಿದಂತೆ ಕೆಲ ಕಾರಣಗಳಿಂದ ಕಳೆದ ಕೆಲ ವರ್ಷಗಳಿಂದ ಸುಗ್ಗಿ ಆಡಿರಲಿಲ್ಲ. ಆದರೆ, ಈ ಬಾರಿ ಊರುರು ಸುತ್ತುತ್ತಾ ಸುಗ್ಗಿ ಆಡುತ್ತಿದ್ದಾರೆ" ಎನ್ನುತ್ತಾರೆ ಸಮುದಾಯದ ಹಿರಿಯರೊಬ್ಬರು.