ಕಾರವಾರ (ಉತ್ತರ ಕನ್ನಡ) : ಜಿಲ್ಲೆಯ ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಹಾಗೂ ಪ್ಯಾರಿ ಸಕ್ಕರೆ ಕಾರ್ಖಾನೆ ನಡುವೆ ಗುದ್ದಾಟ ನಡೆಯುತ್ತಲೇ ಇದೆ. ಸೂಕ್ತ ಬೆಲೆಗೆ ಆಗ್ರಹಿಸಿ ಕಳೆದ ಹದಿನೈದು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದರು. ಈ ಸಂಬಂಧ ಇಂದು ಸ್ವತಃ ಸಕ್ಕರೆ ಇಲಾಖೆ ಆಯುಕ್ತರು ಕಾರವಾರಕ್ಕೆ ಆಗಮಿಸಿ ಕಾರ್ಖಾನೆ ಹಾಗೂ ರೈತರ ನೇತೃತ್ವದಲ್ಲಿ ಸಭೆಯನ್ನ ಸಹ ನಡೆಸಿದರೂ ಒಮ್ಮತದ ನಿರ್ಧಾರ ಬಾರದ ಹಿನ್ನೆಲೆಯಲ್ಲಿ ಅಕ್ಟೋಬರ್ 15 ರಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಸಲು ಮುಂದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ನಡುವಿನ ಗುದ್ದಾಟ ಇದೀಗ ಸರ್ಕಾರದ ಹಂತಕ್ಕೆ ಬಂದು ತಲುಪಿದೆ. ಹಳಿಯಾಳ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ರೈತರಿಗೆ ಯೋಗ್ಯ ದರ ನೀಡುತ್ತಿಲ್ಲ, ಹಿಂದಿನ ಬಾಕಿ ಪಾವತಿಸುತ್ತಿಲ್ಲ, ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೆಚ್ಚುವರಿ ಪಡೆಯಲಾಗುತ್ತಿದೆ ಹಾಗೂ ವಿವಿಧ ಸಮಸ್ಯೆಗಳನ್ನ ಬಗೆಹರಿಸುವ ಬೇಡಿಕೆಗಳನ್ನು ಮುಂದಿಟ್ಟು ಹಳಿಯಾಳದಲ್ಲಿ ಸುಮಾರು 15 ದಿನಗಳಿಂದ ರೈತರು ಪ್ರತಿಭಟನೆ ನಡೆಸಿದ್ದರು.
ಆಯುಕ್ತರ ಸಭೆಯಲ್ಲೂ ಬಗೆಹರಿಯದ ಕಬ್ಬು ಬೆಳೆಗಾರರ ಸಮಸ್ಯೆ ಜಿಲ್ಲಾಧಿಕಾರಿ ಸಭೆ : ಇನ್ನು ರೈತರ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಗೊಂಡಿದ್ದು ಗುರುವಾರ ಸಕ್ಕರೆ ಆಯುಕ್ತರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಹಾಗೂ ಕಾರ್ಖಾನೆ ಅಧಿಕಾರಿಗಳ ಸಭೆಯನ್ನ ನಡೆಸಲಾಯಿತು. ಸಭೆಯಲ್ಲಿ ರೈತರ ಬೇಡಿಕೆ ಕುರಿತು ಚರ್ಚೆ ನಡೆಸಿದ ಆಯುಕ್ತರು ಕಬ್ಬು ಕಟಾವು ಮತ್ತು ಸಾಗಣಿಕೆ ವೆಚ್ಚವು ನಿಗದಿ ಪಡಿಸಿದ್ದಕ್ಕಿಂತ ಜಾಸ್ತಿ ದರವನ್ನು ಪಡೆಯುತ್ತಿದ್ದರೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೋಳ್ಳಲಾಗುವುದು.
ನಾಳೆ ಸಚಿವರೊಂದಿಗೆ ಸಭೆ : ಅಲ್ಲದೇ ಎಸ್.ಎ.ಪಿ ಗೆ ಸಂಬಂಧಿಸಿದಂತೆ ಹಲವಾರು ರೈತ ಮುಖಂಡರು ಈಗಾಗಲೇ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದು, ಮುಖ್ಯ ಮಂತ್ರಿಯವರು ಸಕ್ಕರೆ ಸಚಿವರಿಗ ನಿರ್ದೇಶನ ನಿಡಿದ್ದಾರೆ. ಈ ಕುರಿತು ನಾಳೆ ಎಲ್ಲ ರೈತ ಮುಖಂಡರ ಜೋತೆ ಸಭೆ ನಡೆಸಿ ಈ ವಿಷಯದ ಕುರಿತು ಚರ್ಚೆ ನಡೆಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರವಾರದಲ್ಲಿ ಸಕ್ಕರೆ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇವಲ ಹಳಿಯಾಳ ಮಾತ್ರವಲ್ಲದೇ ಕಲಘಟಗಿ, ಮುಂಡಗೋಡ ಸೇರಿದಂತೆ ವಿವಿಧ ಭಾಗದಿಂದ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ರೈತರು ಪಾಲ್ಗೊಂಡಿದ್ದರು. ಸಭೆಯ ನಂತರ ಮಾತನಾಡಿದ ರೈತ ಮುಖಂಡರು, ಸಭೆಯಲ್ಲಿಯೇ ಹಲವು ವಿಚಾರಗಳನ್ನ ಚರ್ಚೆ ನಡೆಸಲಾಯಿತು. ಆದರೆ ಜಿಲ್ಲೆಯಲ್ಲಿಯೇ ರೈತರ ಸಮಸ್ಯೆಗಳನ್ನ ಆಯುಕ್ತರ ಈಡೇರಿಸಬಹುದಿತ್ತು. ಇದೀಗ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆಯನ್ನ ನಡೆಸಲು ಮುಂದಾಗಿದ್ದು ನಮಗೆ ಬೇಸರ ತಂದಿದೆ. ಅಲ್ಲದೇ ರೈತರ ಹೋರಾಟ, ಸಭೆ ಆಯೋಜನೆಯನ್ನ ಸಹ ರಾಜಕೀಯ ಲಾಭಕ್ಕೆ ಕೆಲವರು ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪವನ್ನ ರೈತ ಮುಖಂಡರು ಮಾಡಿದರು.
ರಾಜಕೀಯ ಲಾಭಕ್ಕೆ ಪ್ರಯತ್ನ : ಹಳಿಯಾಳದಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಬಿಜೆಪಿ ನಾಯಕರು ಲಾಭವನ್ನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ರೈತರ ಹೋರಾಟದಿಂದ ಸಭೆಯನ್ನ ತಾವೇ ಆಯೋಜನೆ ಮಾಡಿರುವುದಾಗಿ ಕೆಲ ಬಿಜೆಪಿ ನಾಯಕರು ಲಾಭ ಪಡೆಯಲು ಹೊರಟಿದ್ದಾರೆ ಎನ್ನುವ ಆರೋಪವನ್ನ ಸ್ವತಃ ಬೆಳೆಗಾರರು ಮಾಡಿದ್ದು ಕಬ್ಬು ಬೆಳೆಗಾರರ ಹೋರಾಟ ಇದೀಗ ರಾಜಕೀಯಕ್ಕೆ ಸಹ ತಿರುಗುತ್ತಿದ ಎನ್ನಲಾಗಿದೆ.
ಇದನ್ನೂ ಓದಿ :ಕಲಬುರಗಿ: ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ದ್ವಿಪಕ್ಷೀಯ ಒಪ್ಪಂದ