ಕಾರವಾರ: ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು ಪರಿಸರದ ಸೌಂದರ್ಯದ ಜೊತೆಗೆ ನಗರದ ಸ್ವಚ್ಚತೆ ಹಾಳು ಮಾಡುತ್ತವೆ. ಅದರಲ್ಲೂ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳು ಅತಿಯಾಗಿ ತ್ಯಾಜ್ಯವಾಗಿ ಬಿಸಾಡಲ್ಪಡುತ್ತಿರುವುದು ಪರಿಸರಕ್ಕೆ ಮಾರಕವಾಗಿದೆ. ತ್ಯಾಜ್ಯ ಕಂಡರೆ ಮೂಗು ಮುಚ್ಚಿಕೊಳ್ಳುವ ಕಾಲದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬಳಕೆಗೆ ಬಾರದ ನಿರುಪಯುಕ್ತ ವಸ್ತುಗಳಿಂದಲೇ ವಿದ್ಯಾರ್ಥಿಗಳು ಬಗೆ ಬಗೆಯ ಅಲಂಕಾರಿಕ ವಸ್ತುಗಳನ್ನು ಸಿದ್ದಪಡಿಸುವ ಮೂಲಕ ಕುಮಟಾದ ಕೊಂಕಣ ಎಜ್ಯುಕೇಷನ್ ಟ್ರಸ್ಟ್‌ನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು.
ನಿರುಪಯುಕ್ತ ವಸ್ತುಗಳು ಎಂದು ಬಿಸಾಡುವ ಹಳೆಯ ಬಾಟಲಿಗಳು, ಪೆನ್ನು, ಬರೆದ ಕಾಗದಗಳು, ಕೆತ್ತಿದ ಪೆನ್ಸಿಲ್ನ ಕಸ, ಗರಟೆಗಳು, ವಿವಿಧ ಧಾನ್ಯಗಳ ಹೊರಪದರಗಳು, ಶೇಂಗಾ ಸಿಪ್ಪೆ, ಪೇಪರ್ಗಳು, ಐಸ್ಕ್ರೀಮ್ ಕಪ್ಪುಗಳು, ಐಸ್ ಕ್ರೀಮ್ ಚಮಚಗಳು, ಕಡ್ಡಿಗಳು, ಉರಿದ ನಂತರ ಉಳಿಯುವ ಬೆಂಕಿಕಡ್ಡಿ, ಬೆಂಕಿ ಪೊಟ್ಟಣ ಹೀಗೆ ಹತ್ತು ಹಲವು ವಸ್ತುಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆ ಮೂಲಕ ವಿವಿಧ ಮಾದರಿಗಳನ್ನು ತಯಾರಿಸಿದ್ದು, ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಬಗೆಯ ವಸ್ತುಗಳನ್ನು ಗಮನಿಸಿದ ಶಿಕ್ಷಕರು, ಪಾಲಕರು ಹಾಗೂ ಇನ್ನುಳಿದ ತರಗತಿಯ ವಿದ್ಯಾರ್ಥಿಗಳು ಕಸದಿಂದ ಹೀಗೆಯೂ ಮಾಡಬಹುದೇ ಎಂದು ಆಶ್ಚರ್ಯಪಟ್ಟರು. ಶಾಲೆಯಲ್ಲಿ ಆಯೋಜನೆಗೊಂಡಿದ್ದ 'ಕಸದಿಂದ ರಸ' ಹಾಗೂ ಕ್ರಾಫ್ಟ್ ಕಾರ್ಯಾಗಾರದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿ ಗಮನ ಸೆಳೆದರು.