ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಗುಂಪು ಗುಂಪಾಗಿ ನಿಲ್ಲುವ ಬಿಡಾಡಿ ದನಗಳಿಂದಾಗಿ ವಾಹನ ಸವಾರರು ಆತಂಕದಲ್ಲಿ ಸಂಚರಿಸಬೇಕಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದೇ ಸಾಗಬೇಕಿದೆ.
ಇಲ್ಲಿನ ಹೆದ್ದಾರಿಗಳಲ್ಲಿ ಸಂಭವಿಸುವ ಬಹುತೇಕ ಅಪಘಾತಗಳಿಗೆ ಈ ಬಿಡಾಡಿ ದನಗಳೇ ಕಾರಣ ಎನ್ನುವಂತಾಗಿದೆ. ರಾತ್ರಿ ವೇಳೆಯಲ್ಲಿ ಸಂಚರಿಸುವ ಎಷ್ಟೋ ಮಂದಿ ಜಾನುವಾರು ಕಾಣದೇ ಡಿಕ್ಕಿಯಾದ ಪರಿಣಾಮ ಅಪಘಾತಕ್ಕೊಳಗಾಗಿ ಗಾಯಗೊಂಡ ಘಟನೆಗಳು ನಡೆದಿವೆ. ಅಲ್ಲದೇ ಬಹುತೇಕ ದ್ವಿಚಕ್ರ ವಾಹನಗಳ ಅಪಘಾತದಲ್ಲಿ ವಾಹನ ಸವಾರರು ಪ್ರಾಣ ಕಳೆದುಕೊಂಡ ಘಟನೆ ಸಹ ನಡೆದಿದೆ.
ಸೂಕ್ತ ಕ್ರಮಕ್ಕೆ ಆಗ್ರಹ:ಸರಕು ಹೊತ್ತು ಸಾಗುವ ದೊಡ್ಡ ವಾಹನಗಳು ಡಿಕ್ಕಿ ಹೊಡೆದು ಜಾನುವಾರುಗಳು ಸಹ ಹೆದ್ದಾರಿಯಲ್ಲೇ ಪ್ರಾಣ ಬಿಟ್ಟಿವೆ. ಹೀಗಾಗಿ ಹೆದ್ದಾರಿ ಸವಾರರು ಹಾಗೂ ಜಾನುವಾರುಗಳ ಸುರಕ್ಷತೆಯ ದೃಷ್ಟಿಯಿಂದ ಈ ಬಿಡಾಡಿ ದನಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುವುದು ಸ್ಥಳೀಯರ ಆಗ್ರಹ.