ಶಾಸಕ ಶಿವರಾಮ ಹೆಬ್ಬಾರ್ ಹೇಳಿಕೆ ಶಿರಸಿ (ಉತ್ತರ ಕನ್ನಡ) :ಯಲ್ಲಾಪುರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸುವುದು, ಬಿಡುವುದು ನನ್ನ ರಾಜೀನಾಮೆ ಮೇಲೆ ನಿಂತಿದೆ. ಆ ಶಕ್ತಿ, ಧೈರ್ಯ ಇದ್ದಾಗ ಅಂತ ನಿರ್ಣಯ ಕೈಗೊಳ್ಳುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶನಿವಾರ ಪತ್ರಕರ್ತರ ಜತೆ ಮಾತನಾಡಿದ ಅವರು, 'ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿಯಲ್ಲ. ಈಗ ಶಾಸಕನಾಗಿದ್ದೇನೆ. ನಾನು ರಾಜೀನಾಮೆ ನೀಡಿದರೆ ಮಾತ್ರ ಉಪ ಚುನಾವಣೆ. ನಾನು ಲೋಕಸಭೆಗೂ ಇಲ್ಲ. ಈಗ ರಾಜೀನಾಮೆಯೂ ಇಲ್ಲ' ಎಂದರು.
ಬಳಿಕ ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಮಾಧ್ಯಮಗಳಲ್ಲಿ ನಿರಂತರವಾಗಿ ಬರುತ್ತಿದೆ. ಆದರೆ ನಾನು ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ನವರಾತ್ರಿ ಹಬ್ಬದ ನಂತರ, ದೀಪಾವಳಿ ಹಬ್ಬದ ನಂತರ ಕಾಂಗ್ರೆಸ್ ಸೇರುತ್ತೇನೆ ಎಂದು ಪತ್ರಿಕೆಯವರು ಬರೆದಿದ್ದಾರೆ. ಆದರೆ ನಾನು ಈ ಬಗ್ಗೆ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟ ಪಡಿಸಿದರು.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕೆಲ ಪದಾಧಿಕಾರಿಗಳನ್ನು ಸ್ಥಾನದಿಂದ ವಿಮುಕ್ತಿಗೊಳಿಸಿ ಈಗ ವಾಪಸ್ ಅದೇ ಸ್ಥಾನ ನೀಡಲಾಗಿದೆ. ಇದರಿಂದ ಬೇಸರವಾಗಿದೆ. ಆದರೆ, ಇದು ಸಂಘಟನೆ ನಿರ್ಣಯವಾಗಿದೆ. ಪ್ರಶ್ನಿಸುವ ಜಾಗದಲ್ಲಿ ನಾನಿಲ್ಲ. ಪದಾಧಿಕಾರಿ ಹುದ್ದೆಯಿಂದ ತೆಗೆದಿದ್ದು ಏಕೆ? ಮತ್ತೆ ತೆಗೆದುಕೊಂಡಿದ್ದು ಏಕೆ? ಎಂಬುದನ್ನು ಯಾರು ಮಾಡಿದ್ದಾರೋ ಅವರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಕ್ಷೇತ್ರದ ಜನತೆ ಹೊರತಾಗಿ ನನ್ನನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ನಾನು ಲೀಡರ್ ಬೇಸ್ ರಾಜಕಾರಣಿ ಅಲ್ಲ, ಕೇಡರ್ ಬೇಸ್ ರಾಜಕಾರಣಿ ಎಂದರು. ಜನ ಮಾತ್ರ ನನ್ನನ್ನು ಕಡೆಗಣಿಸಬಹುದು. ಆದರೆ ನಾನು ಯಾವ ನಾಯಕರಿಗೂ ಹೆದರುವುದಿಲ್ಲ ಎಂದು ಖಡಕ್ ಉತ್ತರ ನೀಡಿದರು.
ಬನವಾಸಿಯಲ್ಲಿ ನಡೆಸುವ ಕದಂಬೋತ್ಸವ ಈ ಬಾರಿ ನಡೆಸುವ ಸಾಧ್ಯತೆ ಕ್ಷೀಣಿಸಿದೆ. ಬರದ ಹಿನ್ನೆಲೆಯಲ್ಲಿ ಉತ್ಸವ ಆಚರಣೆ ಕಷ್ಟ ಸಾಧ್ಯ. ಉತ್ಸವ ಮಾಡಬೇಕೇ? ಬೇಡವೇ? ಎಂಬ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು. ಇದೇ ವೇಳೆ ಬರ ಅಧ್ಯಯನ ತಂಡ ಬಂದ ಸಂದರ್ಭದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮದ ಅಂಗವಾಗಿ ದೆಹಲಿಗೆ ಹೋಗಿದ್ದೆ. ಅಧ್ಯಯನದಿಂದ ರೈತರಿಗೆ ಅನುಕೂಲ ಆಗಲಿ ಎಂಬುದು ನಮ್ಮ ಆಶಯ. ಜೊತೆಗೆ ವಿಮೆ ಶೀಘ್ರವಾಗಿ ಜಮಾ ಆಗಲಿದೆ ಎಂಬುದು ನಮ್ಮ ಒತ್ತಾಯ ಎಂದು ತಿಳಿಸಿದರು.
ಇದನ್ನೂ ಓದಿ:ನಾವು ವಿರೋಧ ಪಕ್ಷದ ಸ್ಥಾನವನ್ನು ಬಿಟ್ಟುಕೊಡಿ ಎಂದು ಕೇಳಿಲ್ಲ: ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ