ಕಾರವಾರ :ರಾಷ್ಟ್ರೀಯ ಕ್ರೀಡಾಪಟು, ಕಾರವಾರ 'ಚಿನ್ನದ ಹುಡುಗಿ ನಿವೇದಿತಾ' ರಾಜ್ಯ ಮಟ್ಟದ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಮತ್ತು ಡಿಸ್ಕಸ್ ಥ್ರೋನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಮೇ 8 ಮತ್ತು 9ರಂದು ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಮತ್ತು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ 'ಮುಕ್ತ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್' ಕ್ರೀಡಾಕೂಟದಲ್ಲಿ ನಿವೇದಿತಾ ಪ್ರಶಾಂತ ಸಾವಂತ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ 40.08 ಮೀಟರ್ ಹ್ಯಾಮರ್ ಥ್ರೋ ಮಾಡುವ ಮೂಲಕ ಬೆಳ್ಳಿ ಪದಕ ಮತ್ತು 41.90 ಮೀಟರ್ ಡಿಸ್ಕಸ್ ಎಸೆಯುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ. ನಿವೇದಿತಾ ಕಳೆದ 10 ವರ್ಷಗಳಿಂದ ಕಾರವಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ತರಬೇತುದಾರ ಪ್ರಕಾಶ ರೇವಣಕರ ಅವರ ಬಳಿ ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.