ಕಾರವಾರ :ಒಂದೆಡೆ ಕೆಸರು ಗದ್ದೆಯಂತಾಗಿರುವ ಕ್ರೀಡಾಂಗಣ, ಇನ್ನೊಂದೆಡೆ ಅದೇ ಕ್ರೀಡಾಂಗಣದಲ್ಲಿ ಸೇರಿರುವ ನೂರಾರು ವಿದ್ಯಾರ್ಥಿಗಳು, ಮತ್ತೊಂದೆಡೆ ಅಲ್ಲಲ್ಲಿ ಜಾರಿ ಬೀಳುತ್ತಿರುವ ಸ್ಪರ್ಧಾಳುಗಳು. ಈ ಎಲ್ಲ ದೃಶ್ಯ ಕಂಡು ಬಂದಿದ್ದು, ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರದ ಮಾಲಾದೇವಿ ಮೈದಾನದಲ್ಲಿ.
ಹೌದು, ಕಾರವಾರದಲ್ಲಿ ಈವರೆಗೆ ಸುಸಜ್ಜಿತ ಕ್ರೀಡಾಂಗಣ ಇಲ್ಲದೇ ಇರುವುದರಿಂದ ಇರುವ ಸಣ್ಣ ಮೈದಾನದಲ್ಲಿಯೇ ಪ್ರತಿ ಬಾರಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಮಳೆಗಾಲದಲ್ಲಂತೂ ಕೆಸರುಗದ್ದೆಯಂತಾಗುವ ಈ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಕಷ್ಟಪಟ್ಟು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರಕನ್ನಡ ಶೈಕ್ಷಣಿಕ ಜಿಲ್ಲಾ ಮಟ್ಟದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿನ ಅವ್ಯವಸ್ಥೆ ಕ್ರೀಡಾಪಟುಗಳಲ್ಲಿ ಆತಂಕ ಹೆಚ್ಚಿಸಿತು. ಜೊತೆಗೆ, ಮೈದಾನದಲ್ಲಿ ನೀರು ನಿಂತು ಕೆಸರುಗದ್ದೆಯಂತಾದ ಕಾರಣ ಪಾಲಕರು ಕೂಡ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದರು.
"ಮೈದಾನದಲ್ಲಿ ಆಡಲು ಬರುವ ಸ್ಪರ್ಧಾಳುಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಅಲ್ಲದೇ, ವಿಶ್ರಾಂತಿ ಪಡೆಯುವ ಯಾವ ಸ್ಥಳವನ್ನೂ ನಿರ್ಮಿಸಿಲ್ಲ. ಅಕ್ಕಪಕ್ಕದ ಶಾಲೆಗಳಿಗೆ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಇದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಅವರ ಹೊಣೆ ಹೊತ್ತುಕೊಳ್ಳುವವರು ಯಾರು?, ಹವಾಮಾನ ಇಲಾಖೆ ಒಂದು ವಾರದ ಮುಂಚೆಯೇ ಆರೆಂಜ್ ಅಲರ್ಟ್ ನೀಡಿದ್ದರೂ ಸಹ ಇಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ, ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿಕೊಡಬೇಕೆಂದು ಸ್ಥಳೀಯರಾದ" ಅಕ್ಷಯ ನಾಯ್ಕ ಒತ್ತಾಯಿಸಿದ್ದಾರೆ.