ಭಟ್ಕಳ: ರಾಜ್ಯದ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸರ್ಕಾರ ಸಲಹಾ ಸಮಿತಿ ರಚಿಸಿರುವುದಕ್ಕೆ ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಗಂದೂರು ದೇವಾಲಯ ಸಲಹಾ ಸಮಿತಿ ರಚನೆಗೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಿರೋಧ ಕರಿಕಲ್ ಶ್ರೀರಾಮ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿಗಂದೂರು ಸನ್ನಿಧಾನಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ಅಪಚಾರವಾಗದ ರೀತಿಯಲ್ಲಿ ಸಾತ್ವಿಕರು, ಸಜ್ಜನರು, ತಪಸ್ವಿಗಳೂ ಆದ ಡಾ.ರಾಮಪ್ಪ ದೇವಾಲಯದ ಆಡಳಿತವನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ, ಸಿಗಂದೂರು ದೇವಾಲಯದ ಪುರೋಹಿತರಾದ ಶೇಷಗಿರಿ ಭಟ್ಟರು ಹಾಗೂ ಆಡಳಿತ ವರ್ಗದ ಜನರ ನಡುವಿನ ಭಿನ್ನಾಭಿಪ್ರಾಯ ಮುಂದೆ ಇಟ್ಟುಕೊಂಡು ಸರ್ಕಾರ ದೇವಾಲಯದ ಆಡಳಿತಕ್ಕೆ ಸಲಹಾ ಸಮಿತಿ ರಚನೆ ಮಾಡಿದೆ. ಈ ಮೂಲಕ ಸರ್ಕಾರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ನೇಮಿಸಿ ಅಲ್ಲಿನ ಅಧಿಕಾರ ನಿಯಂತ್ರಿಸುವ ಪ್ರಯತ್ನಕ್ಕೆ ಕೈ ಹಾಕಿರುವುದು ರಾಜ್ಯದ ಹಿಂದುಳಿದ ವರ್ಗದ ಜನತೆಯ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ ಎಂದರು.
ಈ ನಡುವೆ ಯಾವುದೇ ಕಾರಣಕ್ಕೂ ಸಿಗಂದೂರು ಕ್ಷೇತ್ರವನ್ನು ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿಸುವುದಿಲ್ಲ ಎಂದು ನ.7ರಂದು ತಮ್ಮನ್ನು ಭೇಟಿ ಮಾಡಿದ ಹಿಂದುಳಿದ ವರ್ಗಗಳ ಸ್ವಾಮೀಜಿಗಳಿಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಆದರೆ, ದೇವಾಲಯದ ಆಗುಹೋಗುಗಳ ಬಗ್ಗೆ ಪರಾಮರ್ಶೆ ಮಾಡಲು, ಸಕ್ರೀಯವಾಗಿ ಸರ್ಕಾರಕ್ಕೆ ಮಾಹಿತಿ ನೀಡಲು ಸಲಹಾ ಸಮಿತಿಯನ್ನು 4 ತಿಂಗಳವರೆಗೆ ಮುಂದುವರೆಸಿಕೊಂಡು ಹೋಗುವ ಬಗ್ಗೆ ಮುಖ್ಯಮಂತ್ರಿಗಳು ಪ್ರಸ್ತಾಪಿಸಿರುವುದು ಸರ್ವಥಾ ಜನರು ಒಪ್ಪುವಂತದ್ದಲ್ಲ.
ಯಾವುದೋ ಕಾಣದ ಕೈಗಳು ಈ ವಿಚಾರದಲ್ಲಿ ಕೆಲಸ ಮಾಡಿರುವ ಅನುಮಾನ ಭಕ್ತರನ್ನು ಕಾಡುತ್ತಿದೆ. ಸರ್ಕಾರದ ಕ್ರಮ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ, ಸರ್ಕಾರ ಮುಂದೊಂದು ದಿನ ಸಿಗಂದೂರು ಕ್ಷೇತ್ರವನ್ನೇ ಕೈವಶ ಮಾಡುವ ಸೂತ್ರ ಎಂದೇ ಜನರು ತೀರ್ಮಾನಿಸಿದ್ದಾರೆ. ಬೇರೆ ವರ್ಗ, ಪಂಥಗಳ ಧಾರ್ಮಿಕ ಕೇಂದ್ರಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಬಂದರೆ ಸರ್ಕಾರ ಇಂತಹ ಕ್ರಮ ಕೈಗೊಳ್ಳುತ್ತಿತ್ತೇ ಎನ್ನುವುದನ್ನು ಜನರು ತಿಳಿದುಕೊಳ್ಳಲು ಬಯಸಿದ್ದಾರೆ. ಸಂವಿಧಾನದ ಮೂಲ ತತ್ತ್ವಗಳಿಗೆ ವಿರುದ್ಧವಾಗಿರುವ ಈ ತೀರ್ಮಾನವನ್ನು ಸರಕಾರ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.