ಕರ್ನಾಟಕ

karnataka

ETV Bharat / state

ಸ್ಪೀಕರ್​​​​ ನಿರ್ಧಾರ ಸರಿಯಾಗಿದೆ, ಬಿಜೆಪಿಗೆ ಆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಆನಂದ್​​ ಅಸ್ನೋಟಿಕರ್

ಕಾರವಾರದ ತಮ್ಮ ನಿವಾಸದಲ್ಲಿ ಮಾತನಾಡಿದ ಮಾಜಿ ಸಚಿವ ಆನಂದ್​​ ಅಸ್ನೋಟಿಕರ್​​, ಸ್ಪೀಕರ್​ ನಿರ್ಧಾರ ಸರಿಯಾಗಿದೆ. ಬಿಜೆಪಿ ಅನರ್ಹತೆಯ ಪರ ಮಾತನಾಡುವ ಯಾವುದೇ ನೈತಿಕತೆ ಉಳುಸಿಕೊಂಡಿಲ್ಲ ಎಂದು ಗುಡುಗಿದ್ದಾರೆ.

ಆನಂದ್ ಅಸ್ನೋಟಿಕರ್

By

Published : Jul 29, 2019, 5:43 PM IST

ಕಾರವಾರ: ಅತೃಪ್ತ ಶಾಸಕರು ಗಂಡಸ್ಥನ ಇದ್ದರೆ ಸದನಕ್ಕೆ ಬಂದು ಸರ್ಕಾರದ ವಿರುದ್ಧ ಮತ ಹಾಕಬೇಕಿತ್ತು. ಅದರ ಬದಲು ಮುಂಬೈನಲ್ಲಿ ಕುಳಿತುಕೊಳ್ಳುವುದಲ್ಲ. ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ನಿರ್ಧಾರ ಸರಿಯಾಗಿದೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಕಾರವಾರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್​ನಲ್ಲಿ ಶಾಸಕರ ಅನರ್ಹತೆ ವಿಚಾರವನ್ನು ತಡೆಹಿಡಿಯುವ ಸಾಧ್ಯತೆ ಕಡಿಮೆ ಇದೆ. ತಾವು ಅನರ್ಹಗೊಂಡಿದ್ದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೆವು. ಆದರೆ ನಮಗೆ ಕಾಲಾವಕಾಶ ನೀಡದೇ ಅನರ್ಹಗೊಳಿಸಿದ್ದರು ಎನ್ನುವ ಒಂದೇ ಕಾರಣಕ್ಕೆ ಸುಪ್ರೀಂ ನಮ್ಮ ಪರ ಆದೇಶ ನೀಡಿತ್ತು.

ಆನಂದ್ ಅಸ್ನೋಟಿಕರ್, ಮಾಜಿ ಸಚಿವ

ಆದರೆ ಇದೀಗ ಅತೃಪ್ತ17 ಮಂದಿ ಶಾಸಕರಿಗೆ ಸಾಕಷ್ಟು ಕಾಲಾವಕಾಶ ನೀಡಿದ್ದು, ವಿಚಾರಣೆಗೂ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಅವರು ಸದನಕ್ಕೂ ಹಾಜರಾಗದೆ, 20 ದಿನಗಳ ಕಾಲ ಮುಂಬೈನಲ್ಲಿದ್ದುಕೊಂಡು ನಡೆಸಿದ ಆಟವನ್ನು ರಾಜ್ಯದ ಜನತೆ ನೋಡಿದ್ದಾರೆ. ಹೀಗಾಗಿ ಅವರನ್ನು ಅನರ್ಹಗೊಳಿಸಿ ಸ್ವೀಕರ್ ಕೈಗೊಂಡ ನಿರ್ಧಾರ ಸೂಕ್ತವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣಕ್ಕೆ ಇದೊಂದು ಮಾದರಿಯಾಗಲಿದೆ ಎಂದು ಹೇಳಿದರು.

ಅಲ್ಲದೆ ಈ ವಿಷಯದಲ್ಲಿ ಸುಪ್ರೀಂಕೋರ್ಟ್​ನಲ್ಲಿಯೂ ಸಹ ಅನರ್ಹರಿಗೆ ಹಿನ್ನಡೆಯಾಗಲಿದ್ದು, ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕಾಗಿ, ಹಣದ ಆಮಿಷಕ್ಕಾಗಿ ಪಕ್ಷಾಂತರ ನಾಟಕವಾಡುವವರಿಗೆ ಇದು ತಕ್ಕ ಪಾಠವಾಗಲಿದೆ. ಅಲ್ಲದೆ ಬಿಜೆಪಿ ಅನರ್ಹತೆಯ ಪರ ಮಾತನಾಡುವ ಯಾವುದೇ ನೈತಿಕತೆ ಉಳುಸಿಕೊಂಡಿಲ್ಲ. ಅತೃಪ್ತರನ್ನು ಮುಂದೆ ಮಾಡಿ ಬಿಜೆಪಿ ಏನು ಮಾಡಿದೆ ಎಂಬುದನ್ನು ರಾಜ್ಯ ಮಾತ್ರವಲ್ಲದೇ ದೇಶವೇ ನೋಡಿದೆ. ಆದ್ದರಿಂದ ಸ್ಪೀಕರ್ ನಿರ್ಧಾರ ಸರಿಯಾಗಿದ್ದು, ಸುಪ್ರೀಂಕೋರ್ಟ್​ನಲ್ಲಿಯೂ ಅತೃಪ್ತರಿಗೆ ತಕ್ಕ ಪಾಠವಾಗಲಿದೆ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ABOUT THE AUTHOR

...view details