ಶಿರಸಿ:ಕಳೆದ ಸುಮಾರು 25 ವರ್ಷಗಳಿಂದ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ರಾಜನಾಗಿದ್ದ ಈಗಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಈಗ ಸ್ವಪಕ್ಷೀಯರಿಂದಲೇ ಹಾಗೂ ಸ್ವಕ್ಷೇತ್ರದಲ್ಲಿ ಭಾರೀ ವಿರೋಧದ ಬಿಸಿ ತಟ್ಟುತ್ತಿದೆ.
ಸ್ಪೀಕರ್ ಕಾಗೇರಿಗೆ ಸ್ವ ಪಕ್ಷೀಯರಿಂದ, ಸ್ವ ಕ್ಷೇತ್ರದಲ್ಲಿ ಭಾರೀ ವಿರೋಧ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ನಿಕಟಪೂರ್ವ ಜಿಲ್ಲಾಧ್ಯಕ್ಷರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಕಾಗೇರಿ ಮನಸ್ತಾಪ ಇದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕಳೆದ 6 ಚುನಾವಣೆಗಳಲ್ಲಿ ಸೋಲಿಲ್ಲದ ಸರದಾರನಾಗಿ ಕಾಗೇರಿ ಪ್ರತಿ ಬಾರಿ ಆಯ್ಕೆಯಾಗುತ್ತಿದ್ದಾರೆ. ಪಕ್ಷದೊಳಗೆ ಎಂತಹ ಭಿನ್ನಮತವಿದ್ದರೂ ಅದನ್ನ ಸರಿದೂಗಿಸಿಕೊಂಡು ಹೋಗೋ ಚಾಣಾಕ್ಷತೆ ಅವರಲ್ಲಿದೆ. ಆದರೆ ಈಗೀಗ ಕಾಗೇರಿ ಅವರಿಗೆ ಪಕ್ಷದ ಒಳಗಿನ ಭಿನ್ನಮತ ಶಮನ ಸಾಧ್ಯವಾಗ್ತಾ ಇಲ್ಲ. ಈ ಹಿಂದೆ ಒಂದು ಕಾರ್ಯಕ್ರಮದಲ್ಲಿ ಬಹಿರಂಗವಾಗೇ ಸಿದ್ದಾಪುರ ಬಿಜೆಪಿ ಪ್ರಮುಖರು ಕಾಗೇರಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಬಿಜೆಪಿಯೊಳಗೆ ಶೀತಲ ಸಮರ ಪ್ರಾರಂಭವಾಗಿದೆ. ಸಿದ್ದಾಪುರದ ಬಿಜೆಪಿಯ ಪ್ರಬಲ ನಾಯಕ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಜೊತೆ ಕಾಗೇರಿ ಮುನಿಸಿಕೊಂಡಿದ್ದಾರೆ. ಅವರಿಗೆ ಸಿಗಬೇಕಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ಕಾಗೇರಿಯವರ ವಿರೋಧದಿಂದಾಗಿ ಇನ್ನೂ ತೂಗುಗತ್ತಿಯಲ್ಲಿದೆ. ಇದೀಗ ಸಿದ್ದಾಪುರ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದ ಸಾಮಾನ್ಯ ಮೀಸಲಾತಿಯನ್ನು ತೆಗೆಸುವಲ್ಲಿ ಕಾಗೇರಿಯವರ ಕ್ಷುಲ್ಲಕ ರಾಜಕಾರಣ ಕೆಲಸ ಮಾಡಿದೆ ಅಂತ ಪರೋಕ್ಷವಾಗಿ ಕೆ.ಜಿ.ನಾಯ್ಕ ಆರೋಪಿಸಿದ್ದಾರೆ.
ಒಟ್ಟಿನಲ್ಲಿ 25 ವರ್ಷಗಳಿಂದ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದ ಹಾಲಿ ಸ್ಪೀಕರ್ ಕಾಗೇರಿಯವರಿಗೆ ಇದೀಗ ಕ್ಷೇತ್ರದ ಮೇಲೆ ಆಸೆ ಮಾಯವಾಗ್ತಿದೆ. ಕೈ ಹಿಡಿಯಬೇಕಿದ್ದ ಸ್ವಪಕ್ಷದ ಕಾರ್ಯಕರ್ತರೇ ಮಗ್ಗುಲ ಮುಳ್ಳಾಗಿದ್ದಾರೆ. ಇದು ಹೀಗೇ ಮುಂದುವರೆದರೆ ಈ ಸಲ ಕ್ಷೇತ್ರದ ಆಸೆಯನ್ನು ಕಾಗೇರಿ ಕೈಬಿಡೋ ಪ್ರಸಂಗ ಎದುರಾದರೂ ಅಚ್ಚರಿಯಿಲ್ಲ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.