ಭಟ್ಕಳ (ಉತ್ತರಕನ್ನಡ): ಅನಾರೋಗ್ಯದಿಂದ ಸಾವನ್ನಪ್ಪಿದ ತಾಯಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಗ ಸಾರ್ಥಕತೆ ಮೆರೆದಿರುವ ಘಟನೆ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಇಲ್ಲಿನ ಶಿರಾಲಿ ಮತ್ತಿಗುಂಡಿ ನಿವಾಸಿ ಮಾಸ್ತಮ್ಮ ವೆಂಕಟಪ್ಪ ನಾಯ್ಕ(68) ನೇತ್ರದಾನ ಮಾಡಿದ ವೃದ್ಧೆಯಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಸ್ತಮ್ಮರನ್ನು ಮಗ ಮಂಜುನಾಥ ಆಗಸ್ಟ್ 21ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾಸ್ತಮ್ಮಇಂದು ಸಾವನ್ನಪ್ಪಿದ್ದಾರೆ. ತಾಯಿಯ ಕಣ್ಣು ಇತರರಿಗೆ ಬೆಳಕಾಗಲಿ ಎಂಬ ಉದ್ದೇಶದಿಂದ ತನ್ನ ಕುಟುಂಬದವರ ಒಪ್ಪಿಗೆ ಪಡೆದು, ಮಗ ಮಂಜುನಾಥ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯ ಮೂಲಕ ಉಡುಪಿಯ ಪ್ರಸಾದ ನೇತ್ರಾಲಯಕ್ಕೆ ಮಾಸ್ತಮ್ಮ ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ.