ಕಾರವಾರ(ಉತ್ತರಕನ್ನಡ): ಕಳೆದ ವಾರ ಅಬ್ಬರಿಸಿದ ಅಕಾಲಿಕ ಮಳೆ ಸದ್ಯ ಕೊಂಚ ಬಿಡುವು ನೀಡಿದೆ. ಇನ್ನೇನು ಮಳೆಗಾಲ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು ರೈತರು ಬಿತ್ತನೆ ಕಾರ್ಯಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೃಷಿ ಭೂಮಿಗಳಲ್ಲಿ ಸೈನಿಕ ಹುಳುಗಳ ಬಾಧೆ ಶುರುವಾಗಿದೆ.
ಕಾರವಾರದ ಕಡ್ನೀರು, ಹೊದ್ಕೆ ಶಿರೂರು, ತೊರಗೋಡು, ಬಾಸಳ್ಳಿ ಸೇರಿದಂತೆ ಸುತ್ತಲಿನ ಕೆಲ ಪ್ರದೇಶಗಳಲ್ಲಿ ಸೈನಿಕ ಹುಳುಗಳು ರೈತರಿಗೆ ತಲೆನೋವು ತಂದಿಟ್ಟಿವೆ. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಚಿಗುರಿಕೊಂಡಿರುವ ಹುಲ್ಲಿಗೆ ಸೈನಿಕ ಹುಳಗಳು ಲಗ್ಗೆಇಟ್ಟಿವೆ. ಅಪಾರ ಪ್ರಮಾಣದಲ್ಲಿ ವ್ಯಾಪಿಸಿಕೊಂಡಿರುವ ಈ ಹುಳಗಳು ಕೃಷಿ ಜಮೀನಿನಲ್ಲಿರುವ ಹುಲ್ಲು, ಸಸಿಗಳ ಎಲೆಗಳನ್ನು ತಿಂದುಹಾಕುತ್ತಿವೆ. ಸಸಿಗಳ ನಾಟಿ ಬಳಿಕವೂ ಇದೇ ರೀತಿ ಹುಳುಗಳು ದಾಳಿ ಮಾಡಿದರೆ ವರ್ಷದ ಕೂಳು ಕಳೆದುಕೊಳ್ಳುವ ಆತಂಕ ರೈತ ತಿಮ್ಮಪ್ಪ ನಾಯ್ಕ ಅವರದ್ದು.