ಭಟ್ಕಳ (ಉತ್ತರ ಕನ್ನಡ):ತಾಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ನಾಗರಹಾವು ಕಡಿತಕ್ಕೊಳಗಾದ ಇಬ್ಬರು ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವೈದ್ಯರು ಜಾಗರೂಕತೆಯಿಂದ ಚಿಕಿತ್ಸೆ ನೀಡಿರುವುದು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಮಕ್ಕಳ ಜೀವ ಕಾಪಾಡಿದ ವೈದ್ಯರು ಮಾರುಕೇರಿಯ ವಲಯದ 8 ವರ್ಷದ ಭರತ್ ನಾಯಕ ಎಂಬಾತನಿಗೆ ವಾರದ ಹಿಂದೆ ವಿಷಪೂರಿತ ಹಾವು ಕಡಿದು ಜೀವನ್ಮರಣದ ಸ್ಥಿತಿಯಲ್ಲಿದ್ದ. ಕಾಲಿನಲ್ಲಿ ರಕ್ತ ಸೋರುತ್ತಾ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಮಕ್ಕಳ ತಜ್ಞ ಡಾ. ಸುರಕ್ಷಿತ ಶೆಟ್ಟಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದರು. ಕಚ್ಚಿದ್ದ ಹಾವು ಯಾವುದೆಂದು ತಿಳಿಯದೇ ಆರಂಭದಲ್ಲಿ ಟೆನ್ಷನ್ ಆಗಿತ್ತು. ಕ್ಲಿಷ್ಟಕರ ಸಂದರ್ಭದಲ್ಲಿ ತ್ವರಿತವಾಗಿ ಚಿಕಿತ್ಸೆ ನೀಡಿದ್ದ ವೈದ್ಯೆ ಹಾವಿನ ವಿಷ ಬಾಲಕನ ದೇಹಕ್ಕೆ ಏರದಂತೆ ತೀವ್ರ ನಿಗಾ ವಹಿಸಿದ್ದರು.
ಆದರೆ ರಾತ್ರಿ ಉಸಿರಾಟದಲ್ಲಿ ಏರುಪೇರಾದ್ದರಿಂದ ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಿ ಮತ್ತು ನಿಗಾ ವಹಿಸಿ ಆಸ್ಪತ್ರೆಯ ಇನ್ನಿತರ ವೈದ್ಯರ ಸಹಕಾರದಿಂದ ಪ್ರಾಣಾಪಾಯದಿಂದ ಬಚಾವ್ ಮಾಡಿದ್ದಾರೆ. ಭರತ್ನ ಕಾಲಿಗೆ ಕಳೆದ ಮೂರು ದಿನಗಳ ಹಿಂದಷ್ಟೇ ಶಸ್ತ್ರಚಿಕಿತ್ಸೆ ನಡೆಸಿ ಕೀವು ಸಹಿತ ಕಪ್ಪಾದ ಚರ್ಮವನ್ನು ತೆಗೆದಿದ್ದು, ಬಾಲಕ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ.
ಇನ್ನು ವೆಂಕಟಾಪುರದ ನಾಲ್ಕು ವರ್ಷದ ಬಾಲಕಿ ಶ್ರೇಯಾ ಎಂಬಾಕೆಯ ಕೈಗೆ ಕೂಡ ನಾಗರಹಾವು ಕಚ್ಚಿದ್ದು, ಪಾಲಕರು ಜೀವಂತ ಹಾವು ಸಮೇತ ಆಸ್ಪತ್ರೆಗೆ ಬಂದಿದ್ದರು. ಹೀಗಾಗಿ ವೈದ್ಯರು ಆಕೆಗೆ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಹಾವು ಕಡಿತಕ್ಕೊಳಗಾಗಿ ಜೀವನ್ಮರಣದ ಸ್ಥಿತಿಯಲ್ಲಿದ್ದ ಇಬ್ಬರೂ ಮಕ್ಕಳನ್ನು ಕೋವಿಡ್‌ನಂತಹ ಸಂದರ್ಭದಲ್ಲೂ ಸವಾಲಾಗಿ ತೆಗೆದುಕೊಂಡು ಸೂಕ್ತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿರುವ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸುರಕ್ಷಿತ ಶೆಟ್ಟಿ, ಸರ್ಜನ್ ಡಾ. ಅರುಣ್ ಕುಮಾರ್, ಆಡಳಿತ ವೈದ್ಯಾಧಿಕಾರಿ ಆಗಿರುವ ಅರವಳಿಕೆ ತಜ್ಞೆ ಡಾ. ಸವಿತಾ ಕಾಮತ್ ಮತ್ತು ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.