ಕಾರವಾರ:ಇಷ್ಟಾರ್ಥ ಸಿದ್ದಿಗಾಗಿ ದೇವರ ಮೊರೆ ಹೋಗುವುದು ಸಾಮಾನ್ಯ. ತಮಗೆ ಬಂದಿರುವ ಕಷ್ಟಗಳು ದೂರಾಗಲಿ ಎಂಬ ಕಾರಣಕ್ಕೆ ದೇವರಿಗೆ ವಿಶೇಷ ಪೂಜೆ, ಹರಕೆ ಸಲ್ಲಿಸುವುದುಂಟು. ಆದರೆ ಇಲ್ಲೊಂದು ಕಡೆ ಅಕ್ರಮಗಳಿಗೆ ಸಿಂಹಸ್ವಪ್ನವಾಗಿರುವ ಅಧಿಕಾರಿಯೊಬ್ಬರು ವರ್ಗಾವಣೆಯಾಗಲಿ ಎಂದು ದಂಧೆಕೋರರು ದೇವರಿಗೆ ವಿಶೇಷ ಹರಕೆ ಕಟ್ಟಿಕೊಂಡಿದ್ದಾರೆ.
ಉತ್ತರ ಕನ್ನಡಕ್ಕೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಸುಮನ್ ಪೆನ್ನೇಕರ್ ಕಾಲಿಟ್ಟ ದಿನದಿಂದಲೂ ಅಕ್ರಮ ದಂಧೆಕೋರರನ್ನು ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಅಕ್ರಮ ಮರಳುಗಾರಿಕೆ, ಗಾಂಜಾ, ಇಸ್ಪೀಟ್, ಓಸಿ, ಮಟ್ಕಾದಂತಹ ಅಕ್ರಮ ಚಟುವಟಿಕೆಗಳಿಗೆ ಒಂದೊಂದಾಗಿಯೇ ಕಡಿವಾಣ ಹಾಕುತ್ತಾ ಬಂದಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದೆ ದಂಧೆಕೋರರ ಅಡ್ಡೆಗಳ ಮೇಲೆ ದಾಳಿ ನಡೆಸಿ ಅವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಯಾರಿಗೂ ಜಗ್ಗದೇ 'ಲೇಡಿ ಸಿಂಗಂ'ಮಾದರಿಯಲ್ಲಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಆದರೆ ಈ ಕಟ್ಟುನಿಟ್ಟಿನ ಕ್ರಮಗಳು ಜಿಲ್ಲೆಯಲ್ಲಿನ ದಂಧೆಕೋರರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡಿದೆ. ಅವರು ಅಕ್ರಮ ದಂಧೆಗಳನ್ನು ನಡೆಸಲಾಗದ ಸ್ಥಿತಿ ತಲುಪಿದ್ದಾರೆ. ಇದರಿಂದ ಕಂಗೆಟ್ಟಿರುವ ಕೆಲ ದಂಧೆಕೋರರು ಎಸ್‌ಪಿ ಸುಮನ್ ಅವರನ್ನ ವರ್ಗಾವಣೆ ಮಾಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ರಾಜಕೀಯವಾಗಿ ಒತ್ತಡ ಹೇರುವ ಪ್ರಯತ್ನ ನಡೆಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕೊನೆಯದಾಗಿ ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.