ಶಿರಸಿ: ಸಂತೂರ್ ಎಂಬ ಹೆಸರು ಕೇಳಿದರೆ ಬಹುತೇಕ ಎಲ್ಲರೂ ಸೋಪ್ ಇರಬಹುದು ಎಂದು ಊಹಿಸುತ್ತಾರೆ. ಆದರೆ ಸಂಗೀತದ ಬಗ್ಗೆ ಮಾಹಿತಿ ಇದ್ದವರಿಗೆ ಸಂತೂರ್ ಎಂದರೆ, ಅದೊಂದು ಸಂಗೀತ ವಾದನ ಎಂದು ಗೊತ್ತಾಗುತ್ತದೆ. ಇಂತಹ ಸಂಗೀತ ವಾದನ ಸಂತೂರ್ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ತಯಾರಾಗಿ ದೇಶದಾದ್ಯಂತ ಮಾರಾಟವಾಗುತ್ತಿರುವುದು ವಿಶೇಷವಾಗಿದೆ.
ಪ್ರಸಿದ್ಧ 'ಸುರ್ ಸಂತೂರ್' ನಿರ್ಮಾಣ ಮಾಡುವ ಶಿರಸಿಯ ವುಡ್ ಎಕ್ಸ್ಪರ್ಟ್: ಸಂಗೀತ ಕ್ಷೇತ್ರಕ್ಕೆ ಕರುನಾಡಿನ ಕೊಡುಗೆ
ಹೊಸ ಸಂತೂರ್ ವಾದನವನ್ನು ಆವಿಷ್ಕರಿಸಿ ಅದಕ್ಕೆ ಸುರ್ ಸಂತೂರ್ ಎಂದು ಹೆಸರಿಡುವ ಮೂಲಕ ಶಿರಸಿಯ ಸಹೋದರರು ಗಮನ ಸೆಳೆದಿದ್ದಾರೆ. ಸದ್ಯ, ಇವರು ತಯಾರಿಸುವ ಸುರ್ ಸಂತೂರ್ ದೇಶದಾದ್ಯಂತ ಮಾರಾಟವಾಗ್ತಿದೆ.
ಹೌದು, ಅಪರೂಪದ ಸಂಗೀತ ವಾದನ ಸಂತೂರ್ ತಯಾರಾಗ್ತಿರೋದು ಶಿರಸಿ ಸಮೀಪದ ಹುಸರಿಯಲ್ಲಿ. ಇದರ ತಯಾರಿಕೆಯಲ್ಲಿ ನಿರತರಾಗಿರುವವರ ಹೆಸರು ಶ್ರೀಪಾದ ಹೆಗಡೆ. ಶ್ರೀಪಾದ ಹೆಗಡೆ ಎಸ್ಸೆಸೆಲ್ಸಿ ಮುಗಿಸಿದ್ದು, ಪ್ಲೇವುಡ್ ಕುರಿತಾದ ಕೋರ್ಸ್ ಮಾಡಿದ್ದಾರೆ. ಇವರ ಸಹೋದರ ಶ್ರೀಧರ ಹೆಗಡೆ ಪ್ರಸಿದ್ಧ ಸಂತೂರ್ ವಾದಕರು. ಒಂದು ಸಲ ಹಳೆಯ ಮಾಡೆಲ್ಗಳ ತೂಕ ಮತ್ತು ಟ್ಯೂನಿಂಗ್ ಸಮಸ್ಯೆ ಇವರಿಗೆ ಕಾಡಿದ್ದರಿಂದ ನೂತನ ಮಾಡೆಲ್ ತಯಾರಿಸಬೇಕು ಎನ್ನುವ ಯೋಚನೆ ಬಂತು. ಈ ಬಗ್ಗೆ ಸಹೋದರರಿಬ್ಬರೂ ಕೂಡಿ ಚರ್ಚಿಸಿ ಹಗುರವಾದ ಹಾಗೂ ಸ್ಪೀಡ್ ಟ್ಯೂನಿಂಗ್ಗೆ ಅನುಕೂಲವಾಗುವ ಒಂದು ನೂತನ ಮಾಡೆಲ್ ಅವಿಷ್ಕರಿಸಿಯೇಬಿಟ್ಟರು. ಶ್ರೀಪಾದ ಹೆಗಡೆ ಪ್ಲೇವುಡ್ ಕೋರ್ಸ್ ಮುಗಿಸಿದ್ದರಿಂದ ಈ ಸಂತೂರ್ ವಾದನ ತಯಾರಿಕೆಯ ಆರಂಭದ ಕೆಲಸ ಸುಲಭವಾಯ್ತು.
ಸದ್ಯ, ಮರದ ಕೆಲಸವನ್ನು ಶ್ರೀಪಾದ ಹೆಗಡೆ ಮಾಡಿದರೆ, ಟ್ಯೂನಿಂಗ್ ಮಾಡುವ ಹೊಣೆಗಾರಿಕೆಯನ್ನು ಶ್ರೀಧರ್ ಹೆಗಡೆ ನಿರ್ವಹಿಸುತ್ತಿದ್ದಾರೆ. ವಿಶ್ವದಲ್ಲಿಯೇ ಈ ರೀತಿಯ ಹೊಸ ಮಾಡೆಲ್ನ ತಯಾರಿಕೆ ಬೇರೆಲ್ಲೂ ಇಲ್ಲ. ಈ ನೂತನ ಸಂತೂರ್ ವಾದನಕ್ಕೆ ಕನಿಷ್ಠ 93 ತಂತಿಗಳ ಅವಶ್ಯಕತೆ ಇದೆ. 23 ತಂತಿಗಳನ್ನು ಕೂಡ ವಿಸ್ತರಿಸಬಹುದು. ಸಂತೂರ್ ವಾದನದಲ್ಲಿ ಷಡ್ಜ ಟ್ಯೂನ್ ಮುಖ್ಯವಾಗಿರುತ್ತೆ. ಇದರ ತಯಾರಿಕೆಯಲ್ಲಿ ಮುಖ್ಯವಾಗಿ ಹಿತ್ತಾಳೆ ಪಟ್ಟಿ, ತಂತಿಗಳು ಹಾಗೂ ಪ್ಲೇವುಡ್ಗಳನ್ನು ಬಳಸುತ್ತಾರೆ. ಮೊದಲಿನಿಂದಲೂ ಬಳಕೆಯಲ್ಲಿದ್ದ ಸಂತೂರ್ ವಾದನಕ್ಕೆ ಇನ್ನಷ್ಟು ಹೊಸ ಆಯಾಮಗಳನ್ನು ನೀಡಿ ತಯಾರಿಸಿ 'ಸುರ್ ಸಂತೂರ್' ಎನ್ನುವ ಹೆಸರು ಇಡಲಾಗಿದೆ. ಹಳೆಯ ಮಾಡೆಲ್ಗಳಲ್ಲಿ ಫೈನ್ ಟ್ಯೂನಿಂಗ್ ಮಾಡುವುದು ಕಷ್ಟಕರ. ಆದರೆ, ಈ ನೂತನ ಮಾಡೆಲ್ನಲ್ಲಿ ಫೈನ್ ಟ್ಯೂನಿಂಗ್ಅನ್ನು ಕ್ಷಣಾರ್ಧದಲ್ಲಿ ಮಾಡಬಹುದಾಗಿದೆ. ಇದರ ಸ್ವರ ಕೂಡ ಹೆಚ್ಚು ಹೊತ್ತು ಕ್ರಮಬದ್ಧವಾಗುವಂತೆ ವಿನ್ಯಾಸ ಮಾಡಲಾಗಿದೆ. ಉತ್ತರ ಭಾರತದಲ್ಲಿ ಈ ವಾದನ ಪ್ರಖ್ಯಾತಿ ಹೊಂದಿದ್ದು, ಈ ನೂತನ ಮಾಡೆಲ್ಗಳನ್ನು ಹಲವಾರು ಸಂತೂರ್ ವಿದ್ವಾಂಸರು ಮೆಚ್ಚಿಕೊಂಡಿದ್ದಾರೆ.