ಕಾರವಾರ: ಅದು ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಟ ನಡೆಸುವ ರಾಜ್ಯ ಹೆದ್ದಾರಿ. ಮಾತ್ರವಲ್ಲದೆ ಘಟ್ಟದ ಮೇಲ್ಭಾಗ ಹಾಗೂ ಕರಾವಳಿಯನ್ನು ಬೆಸೆಯುವ ಪ್ರಮುಖ ಸಂಪರ್ಕ ಕೊಂಡಿ ಕೂಡ ಹೌದು. ಸದ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆರಿಸಲಾಗುತ್ತಿದ್ದು, ಕಾಮಗಾರಿ ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 18 ತಿಂಗಳುಗಳ ಕಾಲ ಹೆದ್ದಾರಿಯನ್ನ ಬಂದ್ ಮಾಡಿ ಬದಲಿ ಮಾರ್ಗ ಸೂಚಿಸಿದೆ. ಆದರೆ ಈ ಮಾರ್ಗದಲ್ಲಿ ಬರುವ ನೂರಾರು ಹಳ್ಳಿಗಳ ಜನರು ಸೇರಿದಂತೆ ಪ್ರತಿನಿತ್ಯ ವ್ಯಾಪಾರ ವಹಿವಾಟಿಗೆ ಇದೇ ಹೆದ್ದಾರಿಯನ್ನು ಆಶ್ರಯಿಸಿಕೊಂಡವರು ಇದೀಗ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ.
ಶಿರಸಿ-ಕುಮಟಾ ಹೆದ್ದಾರಿ ಮೇಲ್ದರ್ಜೆಗೆ: ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿ ಹಳ್ಳಿಗಳ ಜನರು! ಹೌದು, ಬಹುನಿರೀಕ್ಷಿತ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆರಿಸುವ ಕನಸಿಗೆ ಕೊನೆಗೂ ಮೂಹುರ್ತ ನಿಗದಿಯಾಗಿದೆ. ಭಾರತ್ ಮಾಲಾ ಪರಿಯೋಜನಾ ಅಡಿಯಲ್ಲಿ ಬೇಲೇಕೇರಿ ಬಂದರನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಶಿರಸಿ-ಕುಮಟಾ ರಾಜ್ಯ ಹೆದ್ದಾರಿ 69ಅನ್ನು ಇದೀಗ ಮೇಲ್ದರ್ಜೆಗೇರಿಸಿ ಶಿರಸಿ-ಕುಮಟಾ-ಬೇಲೇಕೇರಿ ರಾಷ್ಟ್ರೀಯ ಹೆದ್ದಾರಿ 766 ಇಇ ಪರಿವರ್ತಿಸಿ 60 ಕಿ.ಮೀ. ಕಾಮಗಾರಿ ನಡೆಸಲಾಗುತ್ತಿದೆ. ಇದೇ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮನವಿಯಂತೆ ಸದ್ಯ ಕರಾವಳಿ ಹಾಗೂ ಘಟ್ಟದ ಮೇಲ್ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಶಿರಸಿ-ಕುಮಟಾ ಹೆದ್ದಾರಿಯನ್ನು 18 ತಿಂಗಳ ಕಾಲ ಬಂದ್ ಮಾಡಿ ಬದಲಿ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಆದರೆ ಈ ಆದೇಶ ಇದೀಗ ಹೆದ್ದಾರಿಯನ್ನು ಆಶ್ರಯಿಸಿಕೊಂಡವರಿಗೆ ನುಂಗಲಾಗದ ತುತ್ತಾಗಿದ್ದು, ತೀವ್ರ ವಿರೋಧಕ್ಕೆ ಕಾರಣವಾಗಿದೆ. ಘಟ್ಟದ ಮೇಲ್ಭಾಗದ ತಾಲೂಕು ಹಾಗೂ ಇತರೆ ಜಿಲ್ಲೆಗಳನ್ನು ಇದೇ ರಸ್ತೆ ಮೂಲಕವೇ ಸಂಪರ್ಕಿಸಬೇಕು. ಬದಲಿ ಮಾರ್ಗಗಳು ದೂರವಾಗಿರುವ ಮತ್ತು ಸರಿಯಾಗಿ ಇಲ್ಲದ ಕಾರಣ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೆ ಪ್ರತಿನಿತ್ಯ ಮೀನು, ತರಕಾರಿ, ಹಾಲು ಹೀಗೆ ದೈನಂದಿನ ಬಳಕೆಗೆ ಅವಶ್ಯವಿರುವ ವಸ್ತುಗಳು ಇದೇ ರಸ್ತೆ ಮೂಲಕವೇ ಸಾಗಟ ಮಾಡಲಾಗುತ್ತದೆ. ಹೀಗಿರುವಾಗ 18 ತಿಂಗಳುಗಳ ಕಾಲ ಬಂದ್ ಮಾಡಿದಲ್ಲಿ ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಲಿ. ಅಲ್ಲದೆ ಈ ಅಗತ್ಯ ವಸ್ತುಗಳ ಸಾಗಾಟಕ್ಕೂ ಕೂಡ ತೊಂದರೆಯಾಗಲಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಇನ್ನು ನೂರಾರು ಹಳ್ಳಿಗಳ ಜನರು ಪೇಟೆ ಹಾಗೂ ಇತರೆ ಭಾಗಗಳಿಗೆ ತೆರಳಲು ಇರುವ ಏಕೈಕ ಹೆದ್ದಾರಿ ಇದಾಗಿದೆ. ಇದೇ ಬಂದಾದಲ್ಲಿ ಸಂಪರ್ಕವೇ ಕಡಿತಗೊಳ್ಳಲಿದೆ. ಅಲ್ಲದೆ ಜಿಲ್ಲೆಯ ಜನರು ಆಸ್ಪತ್ರೆಗಳಿಗೆ ಉಡುಪಿ, ಮಂಗಳೂರು ಆಶ್ರಯಿಸಿಕೊಂಡಿದ್ದು, ಹೆದ್ದಾರಿ ಬಂದ್ ಮಾಡಿದಲ್ಲಿ ಸಾಕಷ್ಟು ಸಮಸ್ಯೆಯಾಗಲಿದೆ. ಕೂಡಲೇ ಇರುವ ರಸ್ತೆಯಲ್ಲಿ ಒಂದು ಬದಿ ಕಾಮಗಾರಿ ನಡೆಸಿ ಇನ್ನೊಂದು ಬದಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ, ತುರ್ತಾಗಿ ಕಾಮಗಾರಿ ನಡೆಸುವ ಅವಶ್ಯಕತೆ ಇರುವುದರಿಂದ ಭಾರಿ ವಾಹನಗಳಿಗೆ ಬದಲಿ ಮಾರ್ಗ ಗುರುತಿಸಿ ಅನುಮತಿ ನೀಡಲಾಗಿದೆ. ಆದರೆ ಶಿರಸಿ-ಕುಮಟಾ ಮಾರ್ಗ ಮಧ್ಯದಲ್ಲಿರುವ ಹಳ್ಳಿಗಳ ಜನರಿಗೆ ತೊಂದರೆಯಾಗುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಗುತ್ತಿಗೆ ಪಡೆದ ಕಂಪನಿಯವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು. ಅಲ್ಲದೆ ಬದಲಿ ಮಾರ್ಗದಲ್ಲಿ ಏನೇ ಸಮಸ್ಯೆಗಳಿದ್ದರು ಸಹ ಬಗೆಹರಿಸುವುದಾಗಿ ತಿಳಿಸಿದ್ದಾರೆ.