ಕರ್ನಾಟಕ

karnataka

ETV Bharat / state

18 ತಿಂಗಳ ಕಾಲ ಶಿರಸಿ- ಕುಮಟಾ-ಬೆಲೆಕೇರಿ ರಸ್ತೆ ಸಂಚಾರ ಬಂದ್: ಡಿಸಿ ಆದೇಶ - National highway construction

ಶಿರಸಿ-ಕುಮಟಾ-ಬೆಲೆಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭಿಸುತ್ತಿರುವ ಹಿನ್ನೆಲೆ ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ತನಕ ರಸ್ತೆಯನ್ನು ಬಂದ್ ಮಾಡಿ, ಪರ್ಯಾಯ ರಸ್ತೆ ಮಾರ್ಗ ಸೂಚಿಸಿ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.

Road
Road

By

Published : Oct 10, 2020, 10:01 AM IST

ಕಾರವಾರ: ಶಿರಸಿ-ಕುಮಟಾ-ಬೆಲೆಕೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಅಕ್ಟೋಬರ್‌ 12 ರಿಂದ 18 ತಿಂಗಳ ಕಾಲ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯ 60 ಕಿ.ಮೀ. ಹಾಗೂ ರಾಷ್ಟ್ರೀಯ ಹೆದ್ದಾರಿ 66 ರ ಬೆಲೆಕೇರಿ ಕ್ರಾಸ್‌ನಿಂದ ಬೆಲೆಕೇರಿ ಬಂದರಿನವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ‌.ಕೆ.ಹರೀಶಕುಮಾರ್ ಆದೇಶ ಹೊರಡಿಸಿದ್ದಾರೆ.

ಭಾರತ್ ಮಾಲಾ ಫೇಸ್- 1 ಅಡಿಯಲ್ಲಿ ಬೆಲೆಕೇರಿ ಬಂದರನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, ಬೆಲೆಕೇರಿ ಬಂದರು ಲಿಂಕ್ ರೋಡ್‌ನಿಂದ 4.25 ಕಿ.ಮೀ. ಹಾಗೂ ಶಿರಸಿಯಿಂದ ಕುಮಟಾ ವರೆಗೆ 60 ಕಿ.ಮೀ. ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೊಳ್ಳಲಿದ್ದು, ಅಂದಾಜು 370 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ.‌

ಈ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ರಸ್ತೆಯನ್ನು 18 ತಿಂಗಳ ಕಾಲ ಬಂದ್ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿತ್ತು. ಜೊತೆಗೆ ಕಾಮಗಾರಿ ಈ ತಿಂಗಳಲ್ಲೇ ಪ್ರಾರಂಭವಾಗಲಿದ್ದು, ಹಾಗಾಗಿ ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ತನಕ ರಸ್ತೆಯನ್ನು ಬಂದ್ ಮಾಡಿ, ಪರ್ಯಾಯ ರಸ್ತೆ ಮಾರ್ಗ ಸೂಚಿಸಿ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿ ಡಾ. ಕೆ.ಹರೀಶ ಕುಮಾರ್ ಆದೇಶಿಸಿದ್ದಾರೆ.

ಪರ್ಯಾಯ ಮಾರ್ಗ ಎಲ್ಲೆಲ್ಲಿ?:
ಶಿರಸಿ- ಕುಮಟಾ ರಸ್ತೆಯನ್ನು ಬಂದ್ ಮಾಡಿರುವ ಕಾರಣ ಮುಖ್ಯವಾಗಿ ಕುಮಟಾ ಒಂದೇ ಅಲ್ಲದೇ, ಕಾರವಾರ, ಅಂಕೋಲಾ ಹೋಗುವ ವಾಹನಗಳಿಗೂ ತೊಂದರೆ ಆಗುತ್ತದೆ. ಕಾರವಾರ, ಅಂಕೋಲಾ ಹೋಗುವವರಿಗೆ ಪರ್ಯಾಯ ಮಾರ್ಗವಾಗಿ ಯಲ್ಲಾಪುರದ ಎನ್‌ಎಚ್ 63ರಲ್ಲಿ ಸಂಚರಿಸಬಹುದಾಗಿದೆ.

ಹೊನ್ನಾವರ ಭಾಗದಿಂದ ಮಾವಿನಗುಂಡಿ ಮೂಲಕ ಸಾಗಿ ಸಿದ್ದಾಪುರ ತಲುಪಿ, ಅಲ್ಲಿಂದ ಶಿರಸಿಗೆ ತಲುಪಬಹುದಾಗಿದೆ. ಶಿರಸಿಯಿಂದ ಕುಮಟಾ ಹೋಗುವವರು ಸಿದ್ದಾಪುರದ ಮೇಲೆ ಬಡಾಳ ದೊಡ್ಮನೆ ಘಟ್ಟದ ಮೂಲಕ ಹೋಗುವಂತೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದ್ದು, ಇದೊಂದು ಮಾರ್ಗದಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ABOUT THE AUTHOR

...view details